ADVERTISEMENT

‘ಬಿಜೆಪಿ ಬೊಗಳೆ ಆಡಳಿತ’: ಎಎಪಿ ಪುಸ್ತಕ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 20:56 IST
Last Updated 4 ಆಗಸ್ಟ್ 2022, 20:56 IST
ಎಎಪಿಯಿಂದ ಬಿಡುಗಡೆಗೊಂಡ ‘ಬಿಜೆಪಿ ಬೊಗಳೆ ಆಡಳಿತ’ ಎಂಬ ಕಿರು ಪುಸ್ತಕದ ಮುಖಪುಟದ ಚಿತ್ರ
ಎಎಪಿಯಿಂದ ಬಿಡುಗಡೆಗೊಂಡ ‘ಬಿಜೆಪಿ ಬೊಗಳೆ ಆಡಳಿತ’ ಎಂಬ ಕಿರು ಪುಸ್ತಕದ ಮುಖಪುಟದ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರ್ಕಾರದ ವೈಫಲ್ಯಗಳ ಕುರಿತು ಆಮ್‌ ಆದ್ಮಿ ಪಕ್ಷ ‘ಬಿಜೆಪಿಯ ಬೊಗಳೆ ಆಡಳಿತ’ ಎಂಬ ಕಿರು ಪುಸ್ತಕವನ್ನು ಬಿಡುಗಡೆಮಾಡಿದೆ.

‘ಜನರ ಆಶೋತ್ತರಗಳನ್ನು ಈಡೇರಿಸುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಶೇಕಡಾ 40ರಷ್ಟು ಕಮಿಷನ್ ದಂಧೆಯಿಂದಾಗಿ ರಾಜ್ಯದ
ಅಭಿವೃದ್ಧಿ ಕುಂಠಿತಗೊಂಡಿದೆ. ವೈಫಲ್ಯಗಳನ್ನು ಮರೆಮಾಚಲು ಮತ್ತು ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋಮುದ್ವೇಷ ಹರಡುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ’ ಎಂದು ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಬುಧವಾರ ಸುದ್ದಿಗೋಷ್ಠಿಯಲ್ಲಿ
ಆರೋಪಿಸಿದರು.

‘ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆ ಬಲಪಡಿಸುವುದಕ್ಕೆ ಅನುಮೋದನೆ ನೀಡುವುದಾಗಿ 2018ರ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿತ್ತು. ಅಧಿಕಾರಕ್ಕೆ ಬಂದು ಮೂರು ವರ್ಷಗಳಾ
ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಕೋಮು
ದ್ವೇಷ, ಪಿಎಸ್‌ಐ ಹಗರಣ, ಗುತ್ತಿಗೆ ಕಾಮಗಾರಿಗಲ್ಲಿ ಕಮಿಷನ್ ಪಡೆದಿರುವುದೇ ಸರ್ಕಾರದ ಪ್ರಮುಖ ಸಾಧನೆಗಳು’ ಎಂದರು.

ADVERTISEMENT

ಎಎಪಿ ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, ‘ಬಿಜೆಪಿ ಆಡಳಿತದಲ್ಲಿ ಬೆಂಗಳೂರು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆ ಗುಂಡಿಗಳು, ಕಸದ ಅವೈಜ್ಞಾನಿಕ ವಿಲೇವಾರಿ, ಮಳೆ ಬಂದರೆ ಮನೆಗಳಿಗೆ ನುಗ್ಗುವ ನೀರು–ಒಂದೆಡೆ ಈ ಸಮಸ್ಯೆಗಳು; ಸರ್ಕಾರಿ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಲ್ಲದೇ ಇರುವುದು ಇನ್ನೊಂದು ಕಡೆ ಎದ್ದುಕಾಣುತ್ತದೆ‘ ಎಂದು ಆರೋಪಿಸಿದರು.

ಎಎಪಿ ಮಾಧ್ಯಮ ಸಂಚಾಲಕ ಜಗದೀಶ ಸದಂ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.