ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ‘ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಇದೆ ಎಂಬ ಏಕೈಕ ಕಾರಣಕ್ಕೆ ರಾಜ್ಯ ಸರ್ಕಾರ ಅವುಗಳನ್ನು ಮುಚ್ಚಲು ಹೊರಟಿದೆ. ಈ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವರು ಹೇಳುತ್ತಾರೆ. ಆದರೆ, ಕನಿಷ್ಠ ರಕ್ತದೊತ್ತಡ, ಮಧುಮೇಹಕ್ಕೂ ಔಷಧ ಸಿಗುತ್ತಿಲ್ಲ. ದೇಶದಲ್ಲಿ 10 ಸಾವಿರ ಜನೌಷಧಿ ಕೇಂದ್ರಳಿದ್ದು, ಯಾವ ರಾಜ್ಯಗಳಲ್ಲಿಯೂ ಮುಚ್ಚಿಲ್ಲ. ರಾಜ್ಯದಲ್ಲಿ ಮಾತ್ರ ಮುಚ್ಚಲು ಹೊರಟಿದ್ದಾರೆ. ಈ ಬಗ್ಗೆ ತೀವ್ರ ಹೋರಾಟ ಮಾಡುತ್ತೇವೆ’ ಎಂದರು.
‘ರಾಜೀವ್ ಗಾಂಧಿ ಅವರ ಹತ್ಯೆಯಾದ ನಂತರ ಗಾಂಧಿ ಮನೆತನದವರು ಪ್ರಧಾನಿ ಸ್ಥಾನದಲ್ಲಿ ಇಲ್ಲ. ಅಂದಿನಿಂದ ಅವರಿಗೆ ಈ ಪದ ಕೇಳಿದರೆ ಅಲರ್ಜಿ. ಹೀಗಾಗಿ ಪ್ರಧಾನಿ ಹುದ್ದೆಯನ್ನು ಕೆಳದರ್ಜೆಗಿಳಿಸಿದರು. ಪಿ.ವಿ.ನರಸಿಂಹರಾವ್, ಮನಮೊಹನ್ ಸಿಂಗ್ ಅವರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು.
‘ಹಳೇ ಹುಬ್ಬಳ್ಳಿ ಗಲಭೆಗೆ ಪ್ರಕರಣದ ಆರೋಪಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ. ಕಾಂಗ್ರೆಸ್ ಆಡಳಿತದಲ್ಲಿ ತುಷ್ಟೀಕರಣ ಪರಾಕಾಷ್ಠೆ ತಲುಪಿದೆ. ಅವರು ದೇಶದ ಸುರಕ್ಷತೆ ಪರವಾಗಿ ಇದ್ದಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದರು.
‘ಎಲ್ಲ ಮುಸ್ಲಿಮರನ್ನು ನಾವು ವಿರೋಧ ಮಾಡುವುದಿಲ್ಲ. ಮುಸ್ಲಿಂ ಮೂಲಭೂತವಾದಿಗಳು, ಕೋಮುವಾದಿಗಳು, ಭಯೋತ್ಪಾದಕರನ್ನು ಮಾತ್ರ ನಾವು ವಿರೋಧಿಸುತ್ತೇವೆ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದಿಂದ ದೇಶ, ರಾಜ್ಯದ ಸುರಕ್ಷತೆಗೆ ಧಕ್ಕೆ ಬರುತ್ತದೆ. ಮುಸ್ಲಿಂ ಮೂಲಭೂತವಾದಿಗಳಿಗೆ ರಾಜ್ಯ ಸುರಕ್ಷಿತ ಸ್ಥಳವಾಗಿದೆ ಎಂದರು.
‘ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ನಾಶವಾಗಿವೆ ಎಂದು ಅವರೇ ಹೇಳಿದ್ದಾರೆ. ಹೀಗಿದ್ದರೂ ಕಾಂಗ್ರೆಸ್‌ನವರು ಸಾಕ್ಷಿ ಕೇಳುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಭಾರತ ಮೇಲುಗೈ ಸಾಧಿಸಿದ್ದರೂ ಇವರಿಗೆ ಸಂತೋಷವಿಲ್ಲ’ ಎಂದು ಹೇಳಿದರು.
‘ಆಪರೇಷನ್ ಸಿಂಧೂರ ಮೂಲಕ ದೇಶವು ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ನೀಡಿದೆ. ಈ ಬಗ್ಗೆ ಪಾಕಿಸ್ತಾನದಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದ್ದು, ಇಲ್ಲಿಯೂ ಕರೆಯಬೇಕು ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಾಲಿಷವಾದದ್ದು. ಕಾಂಗ್ರೆಸ್‌ನವರು ಪಾಕಿಸ್ತಾನದ ವಕ್ತರಾರಂತೆ ಮಾತನಾಡಬಾರದು. ಶೀಘ್ರ ಅಧಿವೇಶನ ನಡೆಯಲಿದ್ದು, ಅಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚೆ ನಡೆಯಲಿದೆ’ ಎಂದು ಹೇಳಿದರು.
‘ದೇಶವು ಆರ್‌ಎಸ್‌ಎಸ್, ಬಿಜೆಪಿ ಸಿದ್ಧಾಂತವನ್ನು ಸ್ವೀಕರಿಸಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಜನರು ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ ಅವರು ಸತತವಾಗಿ ವಿಫಲರಾಗಿದ್ದಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 148 ಕನ್ನಡ ಶಾಲೆಗಳಿಗೆ ಬೀಗ ಹಾಕಲಾಗಿದ್ದು, 584 ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಉರ್ದು ಭಾಷೆ ಅಭಿವೃದ್ಧಿಗೆ ₹100 ಕೋಟಿ ನೀಡಿರುವ ಸರ್ಕಾರ, ಕನ್ನಡಕ್ಕೆ ಏನೂ ಕೊಟ್ಟಿಲ್ಲ. ಈ ನೀತಿ ಖಂಡನೀಯ’ ಎಂದರು.
‘ದ್ವೇಷ ಭಾಷಣ ಕಾರಣಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸುವ ಸರ್ಕಾರ, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಪ್ರಕರಣ ಹಿಂಪಡೆಯುತ್ತದೆ. ಇದು ಕಾಂಗ್ರೆಸ್‌ನ ತುಷ್ಟೀಕರಣ ನೀತಿಗೆ ಉದಾಹರಣೆ’ ಎಂದರು.
‘ತಮಿಳು ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿರುವುದು ತಪ್ಪು. ತಮಿಳು, ಕನ್ನಡ, ತೆಲುಗು ಪುರಾತನ ಭಾಷೆಗಳಾಗಿವೆ. ವೈಜ್ಞಾನಿಕ ಆಧಾರ ಇಲ್ಲದೆ ಈ ರೀತಿ ಮಾತನಾಡಿ ಅವರು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಖಂಡಿಸಿಲ್ಲ. ಇದನ್ನು ಕನ್ನಡಪರ ಹೋರಾಟಗಾರರು ಪ್ರಶ್ನಿಸಬೇಕು’ ಎಂದು ಹೇಳಿದರು.
ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಹಣ ದುರುಪಯೋಗವಾಗಿದೆ. ಮುಂದಿನ ದಿನಗಳಲ್ಲಿ ಅದು ಹೊರಬೀಳಲಿದೆ. ಕೆಮ್ಮು, ಭ್ರಷ್ಟಾಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಧ ಹುದ್ದೆಗಳಿಗೆ ಹರಾಜು ಹಾಕುತ್ತಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.