ADVERTISEMENT

ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ರದ್ದುಪಡಿಸಲಿ: ಬ್ರಿಜೇಶ್‌ ಕಾಳಪ್ಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:17 IST
Last Updated 14 ಮಾರ್ಚ್ 2023, 4:17 IST
   

ಬೆಂಗಳೂರು: ‘ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣವನ್ನು ತನ್ನ ಸಾಧನೆ ಎಂದು ಬಿಜೆಪಿ ಸರ್ಕಾರ ಬಿಂಬಿಸಿಕೊಳ್ಳುವುದಾದರೆ, ಟೋಲ್‌ ರದ್ದುಪಡಿಸಿ, ಹಣವನ್ನು ಸರ್ಕಾರವೇ ಭರಿಸಲಿ’ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಆಗ್ರಹಿಸಿದರು.

‘ನೂತನ ಹೆದ್ದಾರಿಯನ್ನು ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರು ದಶಪಥ ಎಂದು ಕರೆಯುತ್ತಿದ್ದಾರೆ. ಆದರೆ ಎನ್‌ಎಚ್‌ಎಐ ಹೊರಡಿಸಿರುವ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಆರು ಪಥ ಉಲ್ಲೇಖಿಸಲಾಗಿದೆ. ಉಳಿದ ಶೇ 40ರಷ್ಟು ಪಥಗಳು ಏನಾದವು? ಬಿಜೆಪಿ ಸರ್ಕಾರವು ಶೇ 40ರಷ್ಟು ಕಮಿಷನ್‌ ಪಡೆಯುವಂತೆ ಶೇ 40 ಪಥಗಳನ್ನು ಕೂಡ ಇಲ್ಲದಂತಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಬಿಜೆಪಿ ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ಮಾಡುವ ತರಾತುರಿ ಪ್ರಧಾನಿಯವರಿಗೆ ಏನಿತ್ತು? ಚುನಾವಣೆಗೆ ಇದನ್ನು ಅಸ್ತ್ರವಾಗಿ ಬಳಸಿ ಕೊಳ್ಳಲು ಹೊರಟಿದ್ದಾರಾ? ಇದು ಪ್ರಧಾನಿ ಹುದ್ದೆಯ ಶೋಭೆ ಹೆಚ್ಚಿಸುತ್ತದೆಯೋ ಅಥವಾ ಕಡಿಮೆಯಾಗಿಸುತ್ತದೆಯೋ’ ಎಂದರು. ‘ಪ್ರಧಾನಿ ಅವರು ಫೈಟರ್‌ ರವಿ ಎಂಬ ರೌಡಿಶೀಟರ್‌ಗೆ ನಮಸ್ಕಾರ ಮಾಡಿದ್ದಾರೆ. ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಗೂಂಡಾಗಳಿಗೆ ನಮಸ್ಕಾರ ಮಾಡುವ ಮೂಲಕ ಮೋದಿ ಅವರು ಯಾವ ಸಂದೇಶ ಕೊಡಲು ಹೊರಟಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.