ADVERTISEMENT

ಲೋಕಾಯುಕ್ತಕ್ಕೆ ಮತ್ತೆ ಬಲ ತುಂಬಲು ಚಿಂತನೆ: ಕಾರಜೋಳ

ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯಿಂದ ಶೂನ್ಯ ಸಹಿಷ್ಣುತೆ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 6 ಮೇ 2022, 11:43 IST
Last Updated 6 ಮೇ 2022, 11:43 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬಾಗಲಕೋಟೆ: ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಜೀವ ನೀಡಿ ಮತ್ತೆ ಬಲ ತುಂಬಲು ಚಿಂತನೆ ನಡೆಸಿದ್ದೇವೆ. ಸರ್ಕಾರದ ಈ ಅವಧಿಯಲ್ಲಿಯೇ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜೈಲಿಗೆ ಹೋಗಿ ಬೇಲ್ ಪಡೆದು ಹೊರಗಿರುವವರು, ರಾಜಕೀಯ ಹಗರಣಗಳ ಮು‌ಚ್ಚಿಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಬುಡಸಮೇತ ನಾಶ ಮಾಡಿದವರು ಈಗ ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಗೆ ನೀತಿ ಪಾಠ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಾರಜೋಳ ಹರಿಹಾಯ್ದರು.

ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನ್‌ಸ್ಟೆಬಲ್‌ಗಳಿಂದ ಮೊದಲುಗೊಂಡು ಡಿವೈಎಸ್ಪಿ ಮಟ್ಟದ ಅಧಿಕಾರಿಗಳನ್ನು ಸಿಐಡಿ ಬಂಧಿಸಿರುವುದೇ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಈ ಹಿಂದೆ ಬೇರೆ ಬೇರೆ ಅಕ್ರಮಗಳು ನಡೆದಾಗ ಯಾವುದೇ ಸರ್ಕಾರಗಳು ಕೈಗೊಳ್ಳದ ಕ್ರಮವನ್ನು ಈ ವಿಚಾರದಲ್ಲಿ ನಾವು ಕೈಗೊಂಡಿದ್ದೇವೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಇದು ಬಿಜೆಪಿಯ ಬದ್ಧತೆ ಎಂದರು.

ಅಧಿಕಾರದಲ್ಲಿದ್ದಾಗ ಮೈಸೂರು ಭಾಗದಲ್ಲಿ ಪುತ್ರನ ಮೂಲಕ ಅಕ್ರಮವಾಗಿ ಮರಳುಗಾರಿಕೆ ನಡೆಸಿ ವಿದೇಶಕ್ಕೆ ಕಳುಹಿಸಿಕೊಟ್ಟು ತಿಜೊರಿ ತುಂಬಿಸಿಕೊಂಡವರು ಈಗ ಬಿಜೆಪಿಗೆ ಬುದ್ಧಿ ಹೇಳುತ್ತಿದ್ದಾರೆ ಎಂದು ಹೆಸರು ಹೇಳದೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಕಾರಜೋಳ ಕಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.