ADVERTISEMENT

ಗಾಂಧಿ ಕೃಪೆಯಿಂದ ನೆಹರೂ ಪ್ರಧಾನಿ; ಭೈರಪ್ಪ

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:00 IST
Last Updated 30 ಡಿಸೆಂಬರ್ 2018, 20:00 IST
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರೇಮಾ ಗುಳೇದಗುಡ್ಡ, ಪಿ.ಶಿವಣ್ಣ, ಆರ್‌.ನಿಂಗರಾಜು ಅವರನ್ನು ಸನ್ಮಾನಿಸಲಾಯಿತು. ಪರಿಷದ್‌ನ ಮೈಸೂರು ಘಟಕದ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್‌ ಗೌಡ, ಡಾ.ದೊಡ್ಡರಂಗೇಗೌಡ, ಎಸ್‌.ಎಲ್‌.ಭೈರಪ್ಪ, ಪ್ರೊ.ಪ್ರೇಮಶೇಖರ, ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ್‌ ಭಟ್‌ ಇದ್ದಾರೆ
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರೇಮಾ ಗುಳೇದಗುಡ್ಡ, ಪಿ.ಶಿವಣ್ಣ, ಆರ್‌.ನಿಂಗರಾಜು ಅವರನ್ನು ಸನ್ಮಾನಿಸಲಾಯಿತು. ಪರಿಷದ್‌ನ ಮೈಸೂರು ಘಟಕದ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜ್‌ ಗೌಡ, ಡಾ.ದೊಡ್ಡರಂಗೇಗೌಡ, ಎಸ್‌.ಎಲ್‌.ಭೈರಪ್ಪ, ಪ್ರೊ.ಪ್ರೇಮಶೇಖರ, ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ್‌ ಭಟ್‌ ಇದ್ದಾರೆ   

ಮೈಸೂರು: ‘ನೆಹರೂ ಪ್ರಧಾನಿಯಾಗಲು ಮಹಾತ್ಮ ಗಾಂಧಿ ಕೃಪೆಯೇ ಕಾರಣ. ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾದ ಮಾರ್ಗಗಳಿಂದ ಅವರು ಪ್ರಧಾನಿ ಹುದ್ದೆಗೇರಿದರು’ ಎಂದು ಸಾಹಿತಿ ಡಾ.ಎಸ್.ಎಲ್‌.ಭೈರಪ್ಪ ಇಲ್ಲಿ ಭಾನುವಾರ ಟೀಕಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಆಯೋಜಿಸಿದ್ದ 2ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅಧಿಕಾರವನ್ನು ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥನಿಗೆ ನೀಡಲು ತೀರ್ಮಾನಿಸಿದ್ದರು. ಆ ಸಮಯದಲ್ಲಿ ದೇಶದಲ್ಲಿ ಕಾಂಗ್ರೆಸ್‌ನ 15 ಪ್ರಾಂತೀಯ ಸಮಿತಿಗಳು ಇದ್ದವು. ಅವುಗಳಲ್ಲಿ 12 ಸಮಿತಿಗಳೂ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದವು. ನೆಹರೂ ಅವರನ್ನು ಯಾರೂ ಬೆಂಬಲಿಸಿರಲಿಲ್ಲ’ ಎಂದರು.

ADVERTISEMENT

‘ಗಾಂಧೀಜಿ ಅವರಿಗೆ ನೆಹರೂ ಕುಟುಂಬದ ಮೇಲೆ ಎಲ್ಲಿಲ್ಲದ ವ್ಯಾಮೋಹ ಇತ್ತು. ಪ್ರಧಾನಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರು ಪಟೇಲ್‌ಗೆ ಸೂಚಿಸಿದರು. ಗಾಂಧೀಜಿ ಮಾತನ್ನು ಪಟೇಲ್‌ ಒಪ್ಪಿಕೊಂಡರು. ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿ ನೆಹರೂ ಪ್ರಧಾನಿಯಾದರು’ ಎಂದು ತಿಳಿಸಿದರು.

ನೆಹರೂ ಓದಿದ್ದ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಕಮ್ಯೂನಿಸ್ಟ್‌ ಸಿದ್ಧಾಂತವಿತ್ತು. ಆದ್ದರಿಂದ ಅವರು ಕಮ್ಯೂನಿಸ್ಟ್‌ ಸಿದ್ಧಾಂತದ ಆರಾಧಕರಾದರು. ಅದೇ ಸಿದ್ಧಾಂತವನ್ನು ತಮ್ಮ ಆಡಳಿತದಲ್ಲಿ ತರಲು ಮುಂದಾದರು ಎಂದು ಹೇಳಿದರು.

‘ಸಾಹಿತ್ಯ ಸಮ್ಮೇಳನಗಳು ಸಾಹಿತ್ಯಿಕವಾಗಿರಬೇಕು. ಅಲ್ಲಿ ಘೋಷಣೆಗಳು ಇರಬಾರದು. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಸಾಹಿತ್ಯದ ಹೆಸರಿನಲ್ಲಿ ಆಕರ್ಷಕ ಘೋಷಣೆಗಳು ಕೇಳಿಬರುತ್ತಿವೆ. ಕಮ್ಯೂನಿಸ್ಟ್‌ ಸಿದ್ಧಾಂತವೇ ಇದಕ್ಕೆಲ್ಲಾ ಕಾರಣ’ ಎಂದು ದೂರಿದರು.

ಮೈಸೂರು ವಿ.ವಿ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಸಮ್ಮೇಳನ ಭಾನುವಾರ ಸಂಪನ್ನಗೊಂಡಿತು. ಸಾಧಕರಾದ ಬಾದಾಮಿಯ ಪ್ರೇಮಾ ಗುಳೇದಗುಡ್ಡ, ಶಿವಮೊಗ್ಗದ ಪಿ.ಶಿವಣ್ಣ ಮತ್ತು ಮೈಸೂರಿನ ಆರ್‌.ನಿಂಗರಾಜು ಅವರನ್ನು ಸನ್ಮಾನಿಸಲಾಯಿತು.

ಪರಿಷದ್‌ನ ಮೂರನೇ ರಾಜ್ಯ ಸಮ್ಮೇಳನವನ್ನು 2021 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಪರಿಷದ್‌ ನೂತನ ಅಧ್ಯಕ್ಷ ಪ್ರೊ.ಪ್ರೇಮಶೇಖರ

ಅಂಕಣಕಾರ, ಸಾಹಿತಿ ಪ್ರೊ.ಪ್ರೇಮಶೇಖರ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕರ್ನಾಟಕ ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿದೆ. ಪರಿಷದ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್‌ ಮಿಶ್ರಾ ಈ ವಿಷಯ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.