ADVERTISEMENT

ಎಬಿವಿಪಿ ರೌಡಿ ಪಡೆಯಿಂದ ತೊಂದರೆ: ರಾಜ್ಯಪಾಲರಿಗೆ ಪತ್ರ

ವಿ.ವಿ ಸಿಬ್ಬಂದಿ ನೇಮಕಾತಿ ವಿವಾದಕ್ಕೆ ‘ಜಾತಿ’ ಬಣ್ಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:15 IST
Last Updated 4 ಜೂನ್ 2019, 20:15 IST
ಪ್ರೊ.ಸುಭಾಷ್
ಪ್ರೊ.ಸುಭಾಷ್   

ಬಳ್ಳಾರಿ: ‘ಮಾನ್ಯ ರಾಜ್ಯಪಾಲರೇ, ಬಿಜೆಪಿಯನ್ನು ಪ್ರತಿನಿಧಿಸುತ್ತಿರುವ ಸ್ಥಳೀಯ ಎಬಿವಿಪಿ ಮುಖಂಡರು, ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ತಳಬುಡವಿಲ್ಲದ ಆರೋಪ ಮಾಡುತ್ತಾ, ಪರಿಶಿಷ್ಟ ಜಾತಿಯ ಕುಲಪತಿಯಾದ ನನ್ನ ವಿರುದ್ಧ ಕಾರ್ಯಾಚರಣೆಗಿಳಿದಿದ್ದಾರೆ. ಅವರಿಗೆ ಗೊತ್ತಿಲ್ಲ. ನನ್ನ ಘನತೆಗೆ ಕುಂದು ತರುವ ಅವರ ಪ್ರಯತ್ನದಿಂದ ವಿಶ್ವವಿದ್ಯಾಲಯದ ಘನತೆಗೂ ಕುಂದು ಬರುತ್ತದೆ. ಸ್ವಹಿತಾಸಕ್ತಿ ಸಾಧನೆಗೆ ಮೌಲ್ಯಮಾಪನ ಕುಲಸಚಿವರಿಂದ ನೆರವು ಪಡೆಯುವ ರೌಡಿಪಡೆಯನ್ನು ಸೇರಿಸಿಕೊಂಡ ಎಬಿವಿಪಿಯು ಜಿಲ್ಲೆಗೆ ಕೆಟ್ಟ ಹೆಸರು ತರುತ್ತಿದೆ..’

– ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಅವರು ರಾಜ್ಯಪಾಲರಿಗೆ ಜೂನ್‌ 3ರಂದು ಬರೆದಿರುವ ಪತ್ರದಲ್ಲಿ ಮಾಡಿರುವ ಆರೋಪಗಳಿವು.

ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು 19 ಆರೋಪಗಳುಳ್ಳ ದೂರು ಪತ್ರವನ್ನು ಎಬಿವಿಪಿ ಇತ್ತೀಚೆಗೆ ರಾಜ್ಯಪಾಲರಿಗೆ ಸಲ್ಲಿಸಿತ್ತು. ರಾಜ್ಯಪಾಲರ ಕಚೇರಿಯಿಂದ ಬಂದ ಸೂಚನೆ ಮೇರೆಗೆ ಪ್ರತಿಯೊಂದಕ್ಕೂ ಸ್ಪಷ್ಟನೆಗಳನ್ನು ನೀಡಿರುವ ಕುಲಪತಿ, ಅದೇ ಪ್ರತಿಯನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗೂ ರವಾನಿಸಿರುವುದು ಹೊಸ ಬೆಳವಣಿಗೆ.

ADVERTISEMENT

‘ಎಬಿವಿಪಿ ಮುಖಂಡ ಅಡವಿಸ್ವಾಮಿ ಹೆಸರು ಸ್ಥಳೀಯ ಪೊಲೀಸರ ರೌಡಿಪಟ್ಟಿಯಲ್ಲಿದೆ. ಮತ್ತೊಬ್ಬ ಮುಖಂಡ ಯುವರಾಜ್‌, ಸಂಘಟನೆಯ ಕಾರ್ಯಕ್ರಮವೊಂದಕ್ಕೆ ₹ 1 ಲಕ್ಷ ದೇಣಿಗೆ ಕೇಳಿದ್ದರು. ಸಿಂಡಿಕೇಟ್‌ ಅನುಮತಿ ಮೇರೆಗೆ ಕೇವಲ ₹ 10 ಸಾವಿರ ಕೊಡಲಾಗಿತ್ತು. ಸಿಂಡಿಕೇಟ್‌ಗೆ ದೊಡ್ಡಬಸವನಗೌಡ ಅವರು ನಾಮನಿರ್ದೇಶನಗೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗಿದ್ದ ಮತ್ತೊಬ್ಬ ಮುಖಂಡ ಮಲ್ಲೇಶಿ, ವಿಶ್ವವಿದ್ಯಾಲಯಕ್ಕೆ ಟ್ಯಾಂಕರ್‌ ನೀರು ಸರಬರಾಜು ಮಾಡಲು ಬಯಸಿದ್ದರು. ಆದರೆ ವಿಶ್ವವಿದ್ಯಾಲಯ ಒಪ್ಪಿರಲಿಲ್ಲ. ಈ ಅಂಶಗಳನ್ನೇ ನೆಪವಾಗಿಸಿಕೊಂಡು ಮೂವರೂ ವಿಶ್ವವಿದ್ಯಾಲಯದ ವಿರುದ್ಧ ತಿರುಗಿಬಿದ್ದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಸದ್ಯ ಸಿಂಡಿಕೇಟ್‌ ಸದಸ್ಯರಾಗಿರುವ ದೊಡ್ಡಬಸವನಗೌಡ ಮತ್ತು ವರುಣ್‌ಕುಮಾರ್‌, ಹಿಂದಿನ ಸಿಂಡಿಕೇಟ್‌ ಸದಸ್ಯ ಅಲ್ಲಾವಲಿ ಬಾಷಾ ಕೊಲ್ಮಿ, ಬೋಧಕರ ಹುದ್ದೆಗಳಿಗೆ ತಾವು ಹೇಳಿದವರನ್ನು ನೇಮಿಸಬೇಕು ಎಂದು ಕೇಳಿದ್ದರು. ಅದಕ್ಕೆ ಒಪ್ಪದೇ ಇದ್ದುದರಿಂದ ಅವರು ಸ್ಥಳೀಯ ರೌಡಿಗಳೊಂದಿಗೆ ಸೇರಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕುಲಪತಿ ಆರೋಪಿಸಿದ್ದಾರೆ.

‘ನನ್ನ ತೇಜೋವಧೆಗೆ ನಡೆಯುತ್ತಿರುವ ಪ್ರಯತ್ನಗಳು ತೀವ್ರ ಬೇಸರ ಮೂಡಿಸಿವೆ. ಹೀಗಾಗಿ ರಾಜ್ಯಪಾಲರಿಗೆ ಬರೆದ ಉತ್ತರದ ಪ್ರತಿಗಳನ್ನು ಯಥಾವತ್ತಾಗಿ ಪ್ರಧಾನಿ ಮತ್ತು ರಾಷ್ಟ್ರಪತಿಗೂ ಸಲ್ಲಿಸಿರುವೆ’ ಎಂದು ಪ್ರೊ.ಸುಭಾಷ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.