ADVERTISEMENT

ಎಬಿವಿಪಿ 39 ನೇ ರಾಜ್ಯ ಸಮ್ಮೇಳನಕ್ಕೆ ಮಂಗಳೂರು ಸಜ್ಜು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 17:33 IST
Last Updated 5 ಫೆಬ್ರುವರಿ 2020, 17:33 IST

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪ್ರತಿ ವರ್ಷ ನಡೆಸುವ ರಾಜ್ಯ ಮಟ್ಟದ ‘ವಿದ್ಯಾರ್ಥಿ ಸಮ್ಮೇಳನ’ ವಿದ್ಯಾರ್ಥಿ ಪರಿಷತ್ತಿನ ಕಾರ್ಯಚಟುವಟಿಕೆಯ ಪ್ರಮುಖ ಭಾಗಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ರಚನಾತ್ಮಕ, ಕ್ರಿಯಾಶೀಲ ಚಟುವಟಿಕೆ ಹಾಗೂ ಶೈಕ್ಷಣಿಕ ವಲಯದ ನಾವೀನ್ಯತೆಗೆ ತನ್ನದೇ ಕೊಡುಗೆ ನೀಡುತ್ತಿರುವ ಮಂಗಳೂರಿನಲ್ಲಿ ಈ ಶೈಕ್ಷಣಿಕ ವರ್ಷದ ಸಮ್ಮೇಳನ ಇದೇ 7ರಿಂದ 9ರವರೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ. ನಾಯಕ್‌, ಅಧ್ಯಾಪಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಶೈಕ್ಷಣಿಕ-ಸಾಮಾಜಿಕ ಸಮಸ್ಯೆ, ಸವಾಲುಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಯತ್ನ ನಡೆಯಲಿದೆ ಎಂದರು.

ಇದೇ 7ರಂದು ಸಂಜೆ 4ಗಂಟೆಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಮ್ಮೇಳನ ಉದ್ಘಾಟಿಸುವರು. ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಅಧ್ಯಕ್ಷತೆ ವಹಿಸುವರು. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ್ ಚೌಹಾಣ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿರುವರು. ಮಧ್ಯಾಹ್ನ 3.30ಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಪ್ರದರ್ಶಿನಿ ಉದ್ಘಾಟಿಸುವರು. ರಾತ್ರಿ 9ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಎರಡು ವಿಶೇಷ ಭಾಷಣ: ಎರಡು ವಿಶೇಷ ಭಾಷಣಗಳು ನಡೆಯಲಿದ್ದು, ಇದೇ 8ರಂದು ಬೆಳಿಗ್ಗೆ 11ಕ್ಕೆ ‘ವರ್ತಮಾನ ಭಾರತ’ ವಿಷಯದ ಬಗ್ಗೆ ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೇಕರ್, 9ರಂದು ಬೆಳಿಗ್ಗೆ 9ಕ್ಕೆ ‘ನಮ್ಮ ಕಾರ್ಯಪದ್ಧತಿ -ಸ್ವರೂಪ ಮತ್ತು ಔಚಿತ್ಯ’ ವಿಷಯದ ಬಗ್ಗೆ ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್. ರಘುನಂದನ್ ಮಾತನಾಡಲಿದ್ದಾರೆ ಹೇಳಿದರು.

9ರಂದು ಬೆಳಿಗ್ಗೆ 11ಕ್ಕೆ ‘ಶಿಕ್ಷಣ, ರಾಷ್ಟ್ರ ಮತ್ತು ಸಂಸ್ಕೃತಿ–ಒಂದು ಅವಲೋಕನ’ ನಡೆಯಲಿದ್ದು, ಎಬಿವಿಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಚ.ನ. ಶಂಕರರಾವ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಸಂತ ಕುಮಾರ್, ಎಬಿವಿಪಿ ರಾಜ್ಯ ಘಟಕದ ಉಪಾಧ್ಯಕ್ಷ, ಡಾ.ರೋಹಿಣಾಕ್ಷ ಶಿರ್ಲಾಲು ಪಾಲ್ಗೊಳ್ಳುವರು ಎಂದರು.

ಸ್ವಾಗತ ಸಮಿತಿ ಕಾರ್ಯದರ್ಶಿ ಶಾಂತಾರಾಮ ಶೆಟ್ಟಿ, ಕೋಶಾಧ್ಯಕ್ಷ ಡಾ.ರವಿ ಮಂಡ್ಯ, ಎಬಿವಿಪಿ ನಗರ ಘಟಕದ ಅಧ್ಯಕ್ಷೆ ಭಾರತಿ ಸಂಜಯ ಪ್ರಭು, ಕಾರ್ಯದರ್ಶಿ ಮಣಿಕಂಠ ಕಳಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.