ADVERTISEMENT

ಎಸಿಬಿ ತನಿಖೆ ರದ್ದುಪಡಿಸಲು ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 18:16 IST
Last Updated 20 ಮಾರ್ಚ್ 2021, 18:16 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೊಪ್ಪಳದ ಗ್ರಾಮೀಣ ಕುಡಿಯುವ ನೀರು ಯೋಜನೆ ಅಕ್ರಮಗಳ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸುತ್ತಿರುವ ತನಿಖೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಕೊಪ್ಪಳ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ಪ್ರಶ್ನಿಸಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್‌ಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘2013ರ ಸೆಪ್ಟೆಂಬರ್ 21ರಿಂದ 2014ರ ಫೆಬ್ರುವರಿ 6ರ ನಡುವೆ ಈ ಅಕ್ರಮ ನಡೆದಿದೆ. ಕಾಮಗಾರಿ ನಿರ್ವಹಿಸದೆ ಮತ್ತು ಪರಿಶೀಲನೆ ನಡೆಸದೆ ಬಿಲ್ ಪಾವತಿಸಲಾಗಿದೆ. ಅಳತೆ ಪುಸ್ತಕದಲ್ಲಿ ನಮೂದಾಗಿರುವುದಕ್ಕೂ ಕೆಲಸ ಆಗಿರುವುದಕ್ಕೂ ತಾಳೆ ಆಗುವುದಿಲ್ಲ. ಅಳತೆ ಪುಸ್ತಕದಲ್ಲಿ ಸುಳ್ಳು ನಮೂದಿಸಲಾಗಿದೆ. ಎಲ್ಲಾ ಪುಸ್ತಕದಲ್ಲೂ ಒಂದೇ ದಿನ ಅಳತೆ ನಮೂದಿಸಲಾಗಿದೆ’ ಎಂಬುದು ಎಂಜಿನಿಯರ್‌ಗಳ ಮೇಲಿರುವ ಆರೋಪ.

ADVERTISEMENT

‘ಭ್ರಷ್ಟಾಚಾರ ತಡೆ(ಪಿ.ಸಿ) ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಅರಿವಿನ ಅಪರಾಧ ಎಂದು ದೂರು ದಾಖಲಾಗಿರುವ ಕಾರಣ ತನಿಖೆ ರದ್ದುಗೊಳಿಸಲು ಆಗುವುದಿಲ್ಲ. ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ ಎಂಬ ಆರೋಪ ಇದ್ದು, ಸತ್ಯಾಂಶ ಹೊರಗೆ ಬರಬೇಕಾಗಿದೆ’ ಎಂದು ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಒಟ್ಟು ₹23.4 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು 2016ರ ಅಕ್ಟೋಬರ್ 3ರಂದು ಸರ್ಕಾರ ಎಸಿಬಿಗೆ ವಹಿಸಿತ್ತು. ಅದೇ ವರ್ಷದ ನವೆಂಬರ್‌ 7ರಂದು ಎಫ್‌ಐಆರ್ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.