ADVERTISEMENT

ಎಸಿಬಿ ದಾಳಿ: ಲಕ್ಷಗಟ್ಟಲೆ ನಗದು ಪತ್ತೆ

ಏಳು ಅಧಿಕಾರಿಗಳಿಗೆ ಸೇರಿದ 36 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 17:27 IST
Last Updated 2 ಫೆಬ್ರುವರಿ 2021, 17:27 IST
ಎಸಿಎಫ್ ಶ್ರೀನಿವಾಸ್ ಅವರ ಚಿತ್ರದುರ್ಗದ ಮನೆಯಲ್ಲಿ ದೊರೆತ ಚಿನ್ನದ ಆಭರಣ ಮತ್ತು ನಗದು
ಎಸಿಎಫ್ ಶ್ರೀನಿವಾಸ್ ಅವರ ಚಿತ್ರದುರ್ಗದ ಮನೆಯಲ್ಲಿ ದೊರೆತ ಚಿನ್ನದ ಆಭರಣ ಮತ್ತು ನಗದು   

ಬೆಂಗಳೂರು: ರಾಜ್ಯದ ಏಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ಆದಾಯಕ್ಕೂ ಮೀರಿ ಅಪಾರ ಪ್ರಮಾಣದ ಆಸ್ತಿ ಮತ್ತು ಹಣ ಸಂಪಾದಿಸಿರುವುದನ್ನು ಪತ್ತೆ ಹಚ್ಚಿದ್ದಾರೆ.

ಬೆಂಗಳೂರು, ಬಳ್ಳಾರಿ, ಕೋಲಾರ, ಧಾರವಾಡ, ಕೊಪ್ಪಳ, ದಕ್ಷಿಣ ಕನ್ನಡ, ಚಿತ್ರದುರ್ಗ ಸೇರಿದಂತೆ ಏಳು ಅಧಿಕಾರಿಗಳಿಗೆ ಸೇರಿದ 36 ಕಡೆ ಏಕ ಕಾಲದಲ್ಲಿ ದಾಳಿ ನಡೆಸಲಾಯಿತು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ನಗರ ಮತ್ತು ಗ್ರಾಮಾಂತರ ಯೋಜನೆಗಳ ಜಂಟಿ ನಿರ್ದೇಶಕ ಕೆ.ವಿ. ಜಯರಾಜ್ ಅವರು 2 ವಾಸದ ಮನೆ, 3 ನಿವೇಶನ, ₹11 ಲಕ್ಷ ನಗದು, ₹10 ಲಕ್ಷ ಮೌಲ್ಯದ ವಿಮಾ ಬಾಂಡ್‌ಗಳು, ಬ್ಯಾಂಕ್ ಖಾತೆಗಳಲ್ಲಿ ₹77 ಲಕ್ಷ, ಪತ್ನಿಯ ಹೆಸರಿನಲ್ಲಿ ₹20 ಲಕ್ಷ ಠೇವಣಿ, 191 ಗ್ರಾಂ ಚಿನ್ನದ ಆಭರಣಗಳು, 1 ಕೆ.ಜಿ ಬೆಳ್ಳಿ ಆಭರಣಗಳಿಗೆ ಒಡೆಯರಾಗಿದ್ದಾರೆ.

ADVERTISEMENT

ಕೋಲಾರದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎನ್. ವಿಜಯಕುಮಾರ್‌ ಅವರ ಬಳಿ 3 ವಾಸದ ಮನೆ, 3 ಫ್ಲ್ಯಾಟ್‌ಗಳು, 3 ನಿವೇಶನ, 1 ಖಾಸಗಿ ಆಸ್ಪತ್ರೆ, 2 ಕಾರುಗಳು, 1 ದ್ವಿಚಕ್ರ ವಾಹನ, ಬ್ಯಾಂಕ್‌ಗಳಲ್ಲಿ ₹61.21 ಲಕ್ಷ ಠೇವಣಿ, 1 ಎಕರೆ 13 ಗುಂಟೆ ಕೃಷಿ ಜಮೀನು ಇರುವುದು ಪತ್ತೆಯಾಗಿದೆ.

ಬೆಂಗಳೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ. ಪಾಂಡುರಂಗ ಗರಗ ಅವರು 2 ವಾಸದ ಮನೆ, 1 ಫ್ಲಾಟ್, 3 ಕಾರುಗಳು, 1 ಟ್ರ್ಯಾಕ್ಟರ್, 3 ದ್ವಿಚಕ್ರ ವಾಹನ, 1 ಕೆ.ಜಿ 166 ಗ್ರಾಂ ಚಿನ್ನದ ಆಭರಣ, ₹20 ಲಕ್ಷ ಮೌಲ್ಯದ ವಿಮಾ ಪಾಲಿಸಿಗಳು, 31 ಕೆ.ಜಿ ಬೆಳ್ಳಿ ಆಭರಣ, 10 ಎಕರೆ ಕೃಷಿ ಜಮೀನು, ₹4.44 ಲಕ್ಷ ನಗದು, ₹20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿಗೆ ಒಡೆಯರಾಗಿದ್ದಾರೆ.

ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್‌) ಶ್ರೀನಿವಾಸ್ ಅವರ ಬಳಿ 2 ವಾಸದ ಮನೆ, 1 ಫಾರ್ಮ್ ಹೌಸ್, 2 ನಿವೇಶನಗಳು, 2 ಕಾರುಗಳು, 1 ಟ್ರ್ಯಾಕ್ಟರ್, 1 ದ್ವಿಚಕ್ರ ವಾಹನ, 850 ಗ್ರಾಂ ಚಿನ್ನ, 3 ಕೆ.ಜಿ 500 ಗ್ರಾಂ ಬೆಳ್ಳಿ ಆಭರಣ, ₹4.87 ಲಕ್ಷ ನಗದು, ಬ್ಯಾಂಕ್ ಖಾತೆಗಳಲ್ಲಿ ₹5 ಲಕ್ಷ ಮತ್ತು ₹63 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಇರುವುದು ಪತ್ತೆಯಾಗಿದೆ.

ಕೊಪ್ಪಳದ ಕಿಮ್ಸ್‌ನ ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಶ್ರೀನಿವಾಸ್‌ ಅವರ ಬಳಿ 1 ವಾಸದ ಮನೆ, 4 ನಿವೇಶನ, 2 ಕಾರುಗಳು, 2 ದ್ವಿಚಕ್ರ ವಾಹನಗಳು, 800 ಗ್ರಾಂ ಚಿನ್ನದ ಆಭರಣ, 9 ಕೆ.ಜಿ 300 ಗ್ರಾಂ ಬೆಳ್ಳಿ ಆಭರಣ, ₹1.94 ನಗದು ಇರುವುದು ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಿರಿಯ ಎಂಜಿನಿಯರ್ 8 ಫ್ಲ್ಯಾಟ್‌ ಒಡೆಯ

ಲೋಕೋಪಯೋಗಿ ಇಲಾಖೆಯ ಮಾಗಡಿ ವಿಭಾಗದ ಕಿರಿಯ ಎಂಜಿನಿಯರ್‌ ಚನ್ನಬಸಪ್ಪ ಅವರು 8 ಫ್ಲಾಟ್‌ಗಳು, 1 ಸೂಪರ್ ಮಾರ್ಟ್‌, 1 ಫಾರ್ಮ್ ಹೌಸ್, 2 ಕಾರುಗಳು, 2 ದ್ವಿಚಕ್ರ ವಾಹನ, ₹1.02 ಲಕ್ಷ ನಗದು, 150 ಗ್ರಾಂ ಚಿನ್ನ ಮತ್ತು 650 ಗ್ರಾಂ ಬೆಳ್ಳಿ ಆಭರಣಗಳಿಗೆ ಒಡೆಯರಾಗಿದ್ದಾರೆ.

ಎಂಜಿನಿಯರ್‌ ಬಳಿ ₹59 ಲಕ್ಷ ನಗದು

ಧಾರವಾಡದ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ದೇವರಾಜ್ ಕಲ್ಮೇಶ ಶಿಗ್ಗಾವಿ ಅವರು 2 ವಾಸದ ಮನೆಗಳು, 2 ನಿವೇಶನಗಳು, 2 ಕಾರುಗಳು, 26 ಎಕರೆ ಕೃಷಿ ಜಮೀನು, ₹59.84 ಲಕ್ಷ ನಗದು, ಬ್ಯಾಂಕ್ ಖಾತೆಗಳಲ್ಲಿ ₹30 ಲಕ್ಷ ಠೇವಣಿ, 500 ಗ್ರಾಂ ಚಿನ್ನದ ಆವರಣ, 4 ಕೆ.ಜಿ ಬಳ್ಳಿ ಆಭರಣಗಳು ಮತ್ತು 3 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.