ADVERTISEMENT

ಚಿತ್ರದುರ್ಗ| ಮದ್ಯದಂಗಡಿ ಪರವಾನಗಿ ನವೀಕರಣಕ್ಕೆ ಲಂಚ: ಎಸಿಬಿ ಬಲೆಗೆ ಅಬಕಾರಿ ಡಿಸಿ

​ಪ್ರಜಾವಾಣಿ ವಾರ್ತೆ
Published 10 ಮೇ 2022, 15:25 IST
Last Updated 10 ಮೇ 2022, 15:25 IST
ನಾಗಶಯನ
ನಾಗಶಯನ   

ಚಿತ್ರದುರ್ಗ: ಮದ್ಯದಂಗಡಿಯ ಪರವಾನಗಿ ನವೀಕರಣಕ್ಕೆ ಲಕ್ಷಾಂತರ ರೂಪಾಯಿ ಲಂಚ ಪಡೆದ ಅಬಕಾರಿ ಉಪ ಆಯುಕ್ತ ನಾಗಶಯನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ ಅವರಿಂದ ಲಂಚದ ರೂಪದಲ್ಲಿ ಪಡೆದ ₹ 2.28 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ. ಉಪ ಆಯುಕ್ತ ಹಾಗೂ ಕಾರು ಚಾಲಕ ಮೋಹಿಸಿನ್‌ ಎಂಬುವರನ್ನು ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಬುರೆಡ್ಡಿ ಅವರಿಗೆ ಸೇರಿದ 15 ಮದ್ಯದಂಗಡಿಗಳು ಜಿಲ್ಲೆಯಲ್ಲಿವೆ. ಇವುಗಳ ವಾರ್ಷಿಕ ನವೀಕರಣಕ್ಕೆ ಪ್ರತಿ ಅಂಗಡಿಗೆ ₹ 36 ಸಾವಿರದಂತೆ ₹ 5.4 ಲಕ್ಷಕ್ಕೆ ಉಪ ಆಯುಕ್ತ ನಾಗಶಯನ ಬೇಡಿಕೆ ಇಟ್ಟಿದ್ದರು. ಇದರಲ್ಲಿ ₹ 3.92 ಲಕ್ಷವನ್ನು ಬಾಬುರೆಡ್ಡಿ ನೀಡಿದ್ದರು. ಉಳಿಕೆ ₹ 1.48 ಲಕ್ಷ ಹಾಗೂ ಪ್ರತಿ ಮದ್ಯದಂಗಡಿಯ ಮಾಸಿಕ ಲಂಚದ ಉಳಿಕೆ ಮೊತ್ತ ₹ 1.8 ಲಕ್ಷವನ್ನು ನೀಡುವಂತೆ ಪೀಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇದಕ್ಕೆ ಮಣಿದ ಉದ್ಯಮಿ ಮೇ 6ರಂದು ₹ 1 ಲಕ್ಷ ನೀಡಿದ್ದರು. ಉಳಿದ 2.28 ಲಕ್ಷಕ್ಕೆ ಮತ್ತೆ ಪೀಡಿಸಿದಾಗ ಬಾಬುರೆಡ್ಡಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದರು. ಉಪ ಆಯುಕ್ತರ ಸೂಚನೆಯ ಮೇರೆಗೆ ವಾಹನ ಚಾಲಕ ಮೋಹಿಸಿನ್‌ ಲಂಚ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಮಂಜುನಾಥ್‌ ನೇತೃತ್ವದ ತಂಡ ದಾಳಿ ನಡೆಸಿದೆ. ನಾಗಶಯನ ಅವರ ಪತ್ನಿ ಕವಿತಾ ಐಪಿಎಸ್‌ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.