ADVERTISEMENT

ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಐರಾವತ ಯೋಜನೆ ಸಬ್ಸಿಡಿ ಬಿಡುಗಡೆಗೆ ₹ 25 ಸಾವಿರ ಲಂಚ ಆರೋಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 4:25 IST
Last Updated 30 ನವೆಂಬರ್ 2019, 4:25 IST
ಸರೋಜಾದೇವಿ
ಸರೋಜಾದೇವಿ   

ಬೆಂಗಳೂರು: ಐರಾವತ ಯೋಜನೆಯಡಿ ಕಾರು ಖರೀದಿಸಿದ್ದ ನಗರದ ನಿವಾಸಿಯೊಬ್ಬರಿಗೆ ಸಬ್ಸಿಡಿ ಹಣ ಬಿಡುಗಡೆ ಮಾಡಲು ₹ 25 ಸಾವಿರ ಲಂಚ ಪಡೆಯುತ್ತಿದ್ದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಎ. ಸರೋಜಾದೇವಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಹನುಮಂತು ಎಂಬ ಮಧ್ಯವರ್ತಿ ಮೂಲಕ ಸರೋಜಾದೇವಿ ಲಂಚ ಪಡೆಯುತ್ತಿದ್ದರು. ಅರ್ಜಿದಾರರಿಂದ ಆರೋಪಿ ಲಂಚದ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದರು. ಎಸ್‌ಪಿ ಜಿನೇಂದ್ರ ಖನಗಾವಿ ನೇತೃತ್ವದ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ಐರಾವತ ಯೋಜನೆಯಡಿ ಕಾರು ಖರೀದಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಸಬ್ಸಿಡಿ ಹಣ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಬ್ಸಿಡಿ ಹಣ ಬಿಡುಗಡೆ ಆಗದಿದ್ದರಿಂದ ವಿಚಾರಿಸಲು ಇದೇ 18ರಂದು ರಾಜಾಜಿನಗರದಲ್ಲಿರುವ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಚೇರಿಗೆ ಹೋಗಿದ್ದರು.

ADVERTISEMENT

ಅರ್ಜಿದಾರರು ಸರೋಜಾದೇವಿ ಅವರನ್ನು ಭೇಟಿಯಾದರು. ಸಬ್ಸಿಡಿ ಹಣ ಬಿಡುಗಡೆ ಮಾಡಲು ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ನೀವು ಹಣ ಪಡೆಯಬೇಕಾದರೆ ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿ, ಮಧ್ಯವರ್ತಿ ಹನುಮಂತ ಅವರನ್ನು ಭೇಟಿ ಮಾಡುವಂತೆ ತಿಳಿಸಿದರು.

22ರಂದು ಅರ್ಜಿದಾರರು ಹನುಮಂತು ಅವರನ್ನು ಭೇಟಿಯಾದರು. ₹ 35 ಸಾವಿರ ಲಂಚ ಕೊಡುವಂತೆ ಹೇಳಿ, ಸರೋಜಾದೇವಿ ಅವರನ್ನು ಕಾಣಲು ಸೂಚಿಸಿದರು. ಅದರಂತೆ ಮತ್ತೆ ಅರ್ಜಿದಾರರು ಅಧಿಕಾರಿಯನ್ನು ಕಂಡರು. ಅವರು ₹ 5 ಸಾವಿರ ಕಡಿಮೆ ಮಾಡಿ ಉಳಿದಿದ್ದನ್ನು ಪಾವತಿ ಮಾಡಬೇಕೆಂದರು.

ಅರ್ಜಿದಾರರು ಶುಕ್ರವಾರ ಹನುಮಂತು ಅವರಿಗೆ ₹ 25 ಸಾವಿರ ಹಣ ಕೊಡುವ ಸಮಯದಲ್ಲಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದರು. ಇದಲ್ಲದೆ, ಆರೋಪಿ ಬಳಿ ₹ 20,000 ಮತ್ತು ಸರೋಜಾದೇವಿ ಬಳಿ ₹ 1 ಲಕ್ಷ ಹಣ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.