ADVERTISEMENT

ಕೆಎಎಸ್‌ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿ: 2 ಕೆ.ಜಿ. ಚಿನ್ನ ಪತ್ತೆ

ಶಂಕಿತ ಬೇನಾಮಿ ಮನೆಯಲ್ಲಿ 2 ಕೆ.ಜಿ. ಚಿನ್ನ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 20:45 IST
Last Updated 8 ನವೆಂಬರ್ 2020, 20:45 IST
ಡಾ.ಬಿ. ಸುಧಾ
ಡಾ.ಬಿ. ಸುಧಾ   

ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಕೆಎಎಸ್‌ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ, ಕಚೇರಿ, ನಿಕಟವರ್ತಿಗಳ ಮನೆಗಳ ಮೇಲೆ ಶನಿವಾರ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು, ಶೋಧ ನಡೆಸಿದ್ದಾರೆ.

ಸುಧಾ ಅವರ ಕೊಡಿಗೆಹಳ್ಳಿಯ ಮನೆ, ಯಲಹಂಕದಲ್ಲಿರುವ ಫ್ಲ್ಯಾಟ್‌, ಆರೋಪಿಯ ಬೇನಾಮಿ ಎಂದು ಶಂಕಿಸಲಾಗಿರುವ ನಿವೃತ್ತ ಡಿವೈಎಸ್‌ಪಿ ಚಂದ್ರಶೇಖರ್‌ ಅವರ ಬ್ಯಾಟರಾಯನಪುರದ ಮನೆ, ಮೈಸೂರಿನ ಶ್ರೀರಾಂಪುರದಲ್ಲಿರುವ ಸಂಬಂಧಿಕರ ಮನೆ, ಉಡುಪಿಯ ತೆಂಕ ಮಿಜಾರಿ ನಲ್ಲಿರುವ ಗಂಡನ ಮನೆ ಮತ್ತು ಶಾಂತಿನಗರದಲ್ಲಿರುವ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಚೇರಿಯ ಆಡಳಿತಾಧಿಕಾರಿ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

ಸುಧಾ 2013 ರಿಂದ ಇತ್ತೀಚಿನವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯಲ್ಲಿದ್ದರು. ಕೆಲವು ತಿಂಗಳ ಹಿಂದಷ್ಟೆ ಐಟಿ ಮತ್ತು ಬಿಟಿ ಇಲಾಖೆಯ ಪ್ರಧಾನ ಕಚೇರಿಯ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡಿದ್ದರು.

ADVERTISEMENT

ಅಕ್ರಮ ಆಸ್ತಿ ಸಂಪಾದನೆ ಆರೋಪ ದಡಿ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಜೂನ್‌ 18ರಂದು ಖಾಸಗಿ ದೂರು ಸಲ್ಲಿಸಿದ್ದರು. ಆರೋಪಗಳ ಕುರಿತು ತನಿಖೆ ನಡೆಸು ವಂತೆ ನ್ಯಾಯಾಲಯ ಎಸಿಬಿಗೆ ಆದೇಶಿ
ಸಿತ್ತು. ಆಗಸ್ಟ್‌ 27 ರಂದು ಎಫ್‌ಐಆರ್‌ ದಾಖಲಿಸಿದ್ದ ಎಸಿಬಿ ಅಧಿಕಾರಿಗಳು, ಶನಿವಾರ ಶೋಧ ನಡೆಸಿದ್ದಾರೆ.

2 ಕೆ.ಜಿ. ಚಿನ್ನ ಪತ್ತೆ: ನಿವೃತ್ತ ಡಿವೈಎಸ್‌ಪಿ ಚಂದ್ರಶೇಖರ್‌ ಮನೆಯಲ್ಲಿ 2 ಕೆ.ಜಿ. ಚಿನ್ನ ಪತ್ತೆಯಾಗಿದೆ. ಯಲಹಂಕದಲ್ಲಿರುವ ಸುಧಾ ಅವರ ಫ್ಲ್ಯಾಟ್‌ ಕೀಲಿ, ತನಿಖಾ ತಂಡಕ್ಕೆ ದೊರಕಿಲ್ಲ. ಫ್ಲ್ಯಾಟ್‌ ಬಾಗಿಲಿಗೆ ಮೊಹರು ಮಾಡಿದ್ದು, ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಸುಧಾ ಅವರ ನಿವಾಸದಲ್ಲಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನಾಭರಣ, ದುಬಾರಿ ಬೆಲೆಯ ಕಾರುಗಳು ಪತ್ತೆಯಾಗಿವೆ.

‘ಶೋಧ ಕಾರ್ಯ ಮುಂದುವರಿದಿದೆ. ಪತ್ತೆಯಾಗಿರುವ ದಾಖಲೆಗಳು, ಚಿನ್ನಾಭರಣ ಮತ್ತಿತರ ವಸ್ತುಗಳ ಮೌಲ್ಯ ಮಾಪನ ನಡೆಯುತ್ತಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.