ADVERTISEMENT

ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ನೇತ್ರ ದಾನ ಮಾಡಿ ಅಂಧರ ಬಾಳಿಗೆ ಬೆಳಕಾದ ದಂಪತಿ

ಕೆ.ವಿ.ನಾಗರಾಜ್
Published 10 ನವೆಂಬರ್ 2018, 19:58 IST
Last Updated 10 ನವೆಂಬರ್ 2018, 19:58 IST
ದಿಯಾ ಶೆಖಾವತ್ ಅವರು ಬದುಕಿದ್ದಾಗ ತಂದೆ, ತಾಯಿಯೊಂದಿಗೆ ತೆಗೆದುಕೊಂಡ ಚಿತ್ರ
ದಿಯಾ ಶೆಖಾವತ್ ಅವರು ಬದುಕಿದ್ದಾಗ ತಂದೆ, ತಾಯಿಯೊಂದಿಗೆ ತೆಗೆದುಕೊಂಡ ಚಿತ್ರ   

ನರಸಿಂಹರಾಜಪುರ: ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಶನಿವಾರ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟ ಭದ್ರಾವತಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ದಿಯಾ ಶೆಖಾವತ್ (15) ಅವರ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಪೋಷಕರು ಮಗಳ ಸಾವಿನಲ್ಲೂ ಸಾರ್ಥಕತೆ ಕಂಡು ಕೊಂಡಿದ್ದಾರೆ.

ಪ್ರಸ್ತುತ ಭದ್ರಾವತಿಯ ವಿಐಎಸ್‌ಎಲ್ ಭದ್ರತಾ ವಿಭಾಗದ ಎಜಿಎಂ ಆಗಿರುವ ಕರ್ನಲ್ ರಾಜೇಂದ್ರ ಸಿಂಗ್ ಶೇಖಾವತ್ ಮತ್ತು ವನಿತಾ ಶೆಖಾವತ್ ಅವರ ಏಕೈಕ ಪುತ್ರಿ ದಿಯಾ ಶೆಖಾವತ್ ಹುಟ್ಟಿದ್ದು ರಾಜಸ್ಥಾನದಲ್ಲಿ. 4ನೇ ತರಗತಿಗೆ ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಗೆ ಸೇರಿದ ಅವರು ಪ್ರಸ್ತುತ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಶನಿವಾರ ತಮ್ಮ ಸಹಪಾಠಿಗಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆ ಹೊರಟಿದ್ದ ದಿಯಾ, ನಿಗದಿಪಡಿಸಿದ ಸ್ಥಳಕ್ಕೆ ಹೋಗದಂತೆ ವಿಧಿ ಅವರ ಪ್ರಾಣವನ್ನುಅರ್ಧದಲ್ಲಿಯೇ ತೆಗೆದುಕೊಂಡಿತು. ದಿಯಾ ಶಾಲೆಯಲ್ಲಿ ಚರ್ಚಾ ಸ್ಪರ್ಧೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಳು. ಕ್ರೀಡೆಯಲ್ಲಿ ಎತ್ತರ ಜಿಗಿತ, ಓಟದ ಸ್ಪರ್ಧೆ ಅವರಿಗೆ ಅಚ್ಚುಮೆಚ್ಚಾಗಿತ್ತು. ಸಾಂಸ್ಕೃತಿಕ ಚಟುವಟಿಕೆಗಳ ಜತೆ ಓದಿನಲ್ಲೂ ಸಹ ಸಾಕಷ್ಟು ಚುರುಕಾಗಿದ್ದಳು.

ADVERTISEMENT

‘ದಿಯಾ ಶೆಖಾವತ್, ಸಂಜನಾ ಉಡುಪ, ವಂಶಿಕಾ ಮೂರು ಜನ ಚಾಲಕನ ಹಿಂಭಾಗದ ಸೀಟ್‌ನಲ್ಲಿ ಕುಳಿತಿದ್ದರು. ನಾನು ಮಲಗಿಕೊಂಡಿದ್ದೆ. ಇದ್ದಕ್ಕಿದ್ದಂತೆ ಬಸ್ ಬಿದ್ದಿತು. ಬಲಭಾಗದಲ್ಲಿ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದರಿಂದ ಯಾವುದೇ ಗಾಯವಾಗಿಲ್ಲ’ ಎಂದು ವಿದ್ಯಾರ್ಥಿನಿ ದೇದಿಪಿಯಾ ಘಟನೆಯ ಬಗ್ಗೆ ವಿವರಿಸಿದಳು.

ದಿಯಾಳ ಪಕ್ಕದಲ್ಲಿಯೇ ಕುಳಿತಿದ್ದ ವಂಶಿಕಾ ಜೈನ್ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ರಕ್ತಸಿಕ್ತವಾಗಿದ್ದ ಮಗಳ ದೇಹವನ್ನು ಒಮ್ಮೆಲೆ ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳನ್ನು ಕಳೆದುಕೊಂಡ ತಾಯಿಯ ರೋದನ ಮನಕಲುಕುವಂತಿತ್ತು. ಇಂತಹ ನೋವಿನಲ್ಲೂ ತಮ್ಮ ಮಗಳ ದೇಹವನ್ನು ದಾನ ಮಾಡಲು ಪೋಷಕರು ನಿರ್ಧರಿಸಿದ್ದು ಮಾನವೀಯತೆಯನ್ನು ಮೀರಿದ್ದಾಗಿತ್ತು.

‘ನಮ್ಮ ಮಗಳ ದೇಹದ ವಿವಿಧ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಲಾಗಿತ್ತು. ಕಿಡ್ನಿಗೆ ಪೆಟ್ಟಾಗಿರುವುದರಿಂದ ಮಗಳ ಅಪೇಕ್ಷೆಯಂತೆ ಕಣ್ಣನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡುತ್ತಿದ್ದೇವೆ’ ಎಂದಾಗ ತಂದೆ ಕರ್ನಲ್ ರಾಜೇಂದ್ರ ಸಿಂಗ್ ಶೆಖಾವತ್ ಅವರಲ್ಲಿ ಮುಡುಗಟ್ಟಿದ್ದ ದುಃಖ ಒಮ್ಮೆಲೆ ಉಕ್ಕಿಹರಿಯಿತು.

**

ಶಾಲಾ ಬಸ್‌ ಅಪಘಾತ: ಬಾಲಕಿ ಸಾವು

ನರಸಿಂಹರಾಜಪುರ: ತಾಲ್ಲೂಕಿನ ಸೌತಿಕೆರೆ ಗ್ರಾಮದ ಸಮೀಪ ಶನಿವಾರ ಬೆಳಿಗ್ಗೆ ಶೈಕ್ಷಣಿಕ ಪ್ರವಾಸಕ್ಕೆ ಹೊರಟಿದ್ದ ಶಾಲಾ ಬಸ್ ಅಪಘಾತಕ್ಕೀಡಾಗಿ ಭದ್ರಾವತಿಯ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ದಿಯಾ ಶೆಖಾವತ್ (15) ಮೃತಪಟ್ಟಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ.

ಇವರು ಶೃಂಗೇರಿ, ಕಾರ್ಕಳ, ಉಡುಪಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ಎರಡು ಖಾಸಗಿ ಬಸ್‌ನಲ್ಲಿ ಬೆಳಿಗ್ಗೆ 5.30ಕ್ಕೆ ಹೊರಟಿದ್ದರು. 45 ವಿದ್ಯಾರ್ಥಿಗಳಿದ್ದ ಒಂದು ಬಸ್ ಬೆಳಿಗ್ಗೆ 7 ಗಂಟೆ ವೇಳೆಗೆ ಸೌತಿಕೆರೆ ಗ್ರಾಮದ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಬಲಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ 30 ಅಡಿ ದೂರ ಉಜ್ಜಿಕೊಂಡು ಹೋದ ಪರಿಣಾಮ ಈ ಸಾವು, ನೋವು ಸಂಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.