ADVERTISEMENT

ನಟ ರಾಜ್‌ಕುಮಾರ್ ಅಪಹರಣ: 9 ಆರೋಪಿಗಳ ಖುಲಾಸೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಏಜೆನ್ಸೀಸ್
Published 25 ಫೆಬ್ರುವರಿ 2026, 11:11 IST
Last Updated 25 ಫೆಬ್ರುವರಿ 2026, 11:11 IST
   

ಚೆನ್ನೈ: ಕನ್ನಡದ ಹಿರಿಯ ನಟ ರಾಜ್‌ಕುಮಾರ್ ಅಪಹರಣ ಪ್ರಕರಣದಲ್ಲಿ 9 ಜನರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ತಾಳವಾಡಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ವೇಲ್ಮುರುಗನ್ ಮತ್ತು ಎಂ.ಜ್ಯೋತಿರಾಮನ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

26 ವರ್ಷದ ಹಿಂದೆ ಈರೋಡ್‌ ಜಿಲ್ಲೆಯ ತಾಳವಾಡಿ ಬಳಿ ತೋಟದ ಮನೆಯಲ್ಲಿ ತಂಗಿದ್ದ ರಾಜ್‌ಕುಮಾರ್ ಅವರನ್ನು ವೀರಪ್ಪನ್‌ ಮತ್ತು ಆತನ ಸಹಚರರು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. 108 ದಿನಗಳ ನಂತರ ಬಿಡುಗಡೆ ಮಾಡಿದ್ದರು.

ADVERTISEMENT

ಈ ಪ್ರಕರಣದಲ್ಲಿ ವೀರಪ್ಪನ್ ಮತ್ತು ಅವರ ಸಹಚರರಾದ ಸೇತುಕುಲಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸ್ವಾಮಿ, ಕಲ್ಮಂಡಿ ರಾಮನ್, ಮಾರನ್, ಸೆಲ್ವನ್, ಅಮೃತಲಿಂಗಂ ಮತ್ತು ನಾಗರಾಜ್ ವಿರುದ್ಧ ತಾಳವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣ ಸಂಬಂಧ ದೋಷಾರೋಪಪಟ್ಟಿ ಸಲ್ಲಿಸುವ ಮೊದಲೇ ವೀರಪ್ಪನ್ ಮತ್ತು ಆತನ ಸಹಚರರಾದ ಸೇತುಕುಳಿ ಗೋವಿಂದನ್, ಚಂದ್ರಗೌಡ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದರು. ಮತ್ತೊಬ್ಬ ಆರೋಪಿ ಮಲ್ಲು ಪ್ರಕರಣದ ವಿಚಾರಣೆ ಹಂತದಲ್ಲಿ ಮೃತಪಟ್ಟಿದ್ದರು. ರಮೇಶ್ ಎಂಬಾತ ತಲೆಮರೆಸಿಕೊಂಡಿದ್ದನು.

2018ರ ಸೆಪ್ಟೆಂಬರ್ 25ರಂದು ತೀರ್ಪು ಪ್ರಕಟಿಸಿದ್ದ ಗೋಪಿಚೆಟ್ಟಿಪಾಳ್ಯಂ 3ನೇ ಸೆಷನ್ಸ್ ನ್ಯಾಯಾಲಯ ಉಳಿದ 9 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.