ADVERTISEMENT

ವನ್ಯಜೀವಿ ಉಪಟಳ ಪ್ರದೇಶಕ್ಕೆ ಎಸಿಪಿಸಿಎಫ್‌ ಕಣ್ಗಾವಲು: ಅರಣ್ಯ ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 15:25 IST
Last Updated 9 ನವೆಂಬರ್ 2023, 15:25 IST
<div class="paragraphs"><p>ಸಚಿವ ಈಶ್ವರ ಬಿ. ಖಂಡ್ರೆ</p></div>

ಸಚಿವ ಈಶ್ವರ ಬಿ. ಖಂಡ್ರೆ

   

ಬೆಂಗಳೂರು: ವನ್ಯಜೀವಿಗಳ ಉಪಟಳವಿರುವ ಅರಣ್ಯವಲಯಕ್ಕೆ ಹೆಚ್ಚುವರಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ  ವಾರದಲ್ಲಿ ಕನಿಷ್ಠ ಎರಡು ದಿನವಾದರೂ ಭೇಟಿ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಅರಣ್ಯದಂಚಿನ ವಸತಿ ಪ್ರದೇಶಗಳಲ್ಲಿ ವನ್ಯಜೀವಿ ಹಾವಳಿ ತಡೆಯಲು ತಜ್ಞರ ಸಭೆ ನಡೆಸಬೇಕು. ಸಮಗ್ರ ಕಾರ್ಯಯೋಜನೆ ರೂಪಿಸಲು ಹಾಗೂ ಹೊಸ ತಂತ್ರಜ್ಞಾನ ಅಳವಡಿಕೆ ಕುರಿತು ವರದಿ ಸಲ್ಲಿಸಬೇಕು. ಜನವಸತಿ ಪ್ರದೇಶಕ್ಕೆ ಬಂದ ವನ್ಯಮೃಗಗಳು ಕಾಡಿಗೆ ಮರಳುವವರೆಗೆ ನೇಮಿಸಿರುವ ನೋಡಲ್‌ ಅಧಿಕಾರಿಗಳೇ ಹೊಣೆ ಹೊರಬೇಕು ಎಂದು ಹೇಳಿದರು.

ರಾಜ್ಯದಲ್ಲಿ 6,395 ಆನೆಗಳಿದ್ದು, ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ, ಆನೆಗಳ ಸಂಖ್ಯೆ ಹೆಚ್ಚಳವಾದರೂ, ಅರಣ್ಯ ಪ್ರದೇಶ ಕಿರಿದಾಗುತ್ತಿದೆ. ಕಾಡು ಇಲ್ಲದ ಭಾಗಗಳಲ್ಲೂ ಆನೆಗಳು ಕಾಣಿಸಿಕೊಳ್ಳುತ್ತಿವೆ. ಚಿರತೆ, ಹುಲಿ ದಾಳಿಯಿಂದಲೂ ಜೀವಹಾನಿಯಾಗುತ್ತಿದೆ. ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾದರೆ ಭವಿಷ್ಯದ ಪರಿಸ್ಥಿತಿ ಎದುರಿಸುವ ಕುರಿತೂ ಕಾರ್ಯಯೋಜನೆ ಸಿದ್ಧಪಡಿಸುವ ಅಗತ್ಯವಿದೆ ಎಂದರು.

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಅಧಿಕಾರಿಗಳಾದ ಬ್ರಿಜೇಶ್‌ ಕುಮಾರ್‌ ದೀಕ್ಷಿತ್, ಸುಭಾಷ್‌ ಮಾಲ್ಕಡೆ, ಕುಮಾರ್‌ ಪುಷ್ಕರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.