ಬೆಂಗಳೂರು: ನಟ ಅಂಬರೀಷ್ ಸಿನಿಮಾ ಪ್ರಿಯರು, ಅಭಿಮಾನಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದರು.
ಎಲ್ರಿಗು ನಮಸ್ಕಾರ, ಇದೇನಪ್ಪಾ, ಅಂಬರೀಷ್ ಅವ್ರು ನಮಸ್ಕಾರ– ನಮಸ್ಕಾರ ಅಂತ ಹೇಳ್ತ ಇದ್ದಾರೆ. ಅವ್ರಿಗೆ ವಯಸ್ಸಾಯ್ತು ಅಂತಾ ಅಂದ್ಕೋಬೇಡಿ. ತುಂಬಾ ವರ್ಷಗಳ ನಂತರ ನಿಮ್ಮ ಜತೆ ಈ ಪತ್ರದ ಮುಖಾಂತರ ಮಾತಾಡ್ಬೇಕು ಅನಿಸ್ತು. ಅದಕ್ಕೆ ಒಂದು ಕಾರಣಾನೂ ಇದೆ. ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ.
ಹುಟ್ಟಿದಾಗ ಅಮರ್‌ನಾಥ್ ಆಗಿದ್ದ ನಾನು ಬೆಳಿತಾ ಬೆಳಿತಾ ನಿಮ್ಮ ಅಂಬರೀಷ್ ಆದೆ. ಪುಟ್ಟಣ್ಣನ ಜಲೀಲನ ಪಾತ್ರ ಮಾಡ್ತಾ ಮಾಡ್ತಾ ನನಗೇ ಗೊತ್ತಿಲ್ಲದೆ ನನ್ನೊಳಗೆ ಒಬ್ಬ ಪರಿಪೂರ್ಣ ಕಲಾವಿದ ಬೆಳಿತಾ ಹೋದ. ಹಿಂದಿನ 45 ವರ್ಷಗಳ ಕಾಲ ನೀವು ನನ್ನ ಮೇಲಿಟ್ಟ ಪ್ರೀತಿ, ಅಭಿಮಾನದಿಂದ ನೀವು ನನಗೆ ಕೊಟ್ಟ ಬಿರುದು ‘ರೆಬಲ್ ಸ್ಟಾರ್’.
ಇನ್ನಷ್ಟು ಓದು
ಇಷ್ಟಪಟ್ಟ ಹುಡುಗಿ ಜೊತೆ ಮುಂದೆ ಮದುವೆ ಆಯ್ತು. ಮುದ್ದಾದ ಮಗ ಕೂಡ ಹುಟ್ಟಿದ. ಜೀವನ ನಿಧಾನವಾಗಿ ರಾಜಕೀಯದ ಕಡೆಗೆ ಹಾರಿತು. ಜನಸೇವೆಯನ್ನು ಮಾಡ್ತಾ ಬಂದೆ. ಸಿನಿಮಾ ನಟನೆಯನ್ನೇನು ಬಿಟ್ಟಿರಲಿಲ್ಲ. ಚಿತ್ರರಂಗದ ಆತ್ಮೀಯರು, ಹಿತೈಷಿಗಳು, ಸ್ನೇಹಿತರ ಒತ್ತಾಯಕ್ಕೆ, ಪ್ರೀತಿಗೆ ಸೋತು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾಡ್ತಾ ಇದ್ದೆ. ಸಂತೋಷದ ಜೀವನ ಸಾಗ್ತ ಬಂತು.
ಯಾವಾಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದೆ, ಆಗ ನನ್ನೊಳಗಿನ ಕಲೆ ಹಾಗೇ ಇತ್ತು. ಮಾತನಾಡಲು ಶುರು ಮಾಡಿದೆ. ಆಗ ಹುಟ್ಟಿಕೊಂಡಿದ್ದೇ ಈ ಚಡಪಡಿಕೆ. ಒಳ್ಳೆ ಪಾತ್ರಗಳನ್ನ ಮಾಡುವ ಚಡಪಡಿಕೆ. ವಯಸ್ಸಿಗೊಪ್ಪುವ ಪರಿಪೂರ್ಣವಾದ ಪಾತ್ರಗಳನ್ನು ಮಾಡುವ ಚಡಪಡಿಕೆ. ಈ ಹಂತದಲ್ಲಿ ಜೊತೆಯಾದವನು ಮಗನಂತಹ ಗೆಳೆಯ ‘ಸುದೀಪ’. ಇನ್ನೇನು ಇಬ್ಬರೂ ಸೇರಿಕೊಂಡು ನಿಮ್ಮ ಇಡೀ ಕುಟುಂಬದ ಜೊತೆ ಕುಳಿತು ನೋಡುವ ಚಿತ್ರ ಮಾಡುವುದಕ್ಕಾಗಿ ನಿಶ್ಚಯ ಮಾಡಿದ್ದೀವಿ. ಇನ್ನೇನೂ ತಡ ಇಲ್ಲ, ಆದಷ್ಟೂ ಬೇಗ...
–ಇಂತಿ ನಿಮ್ಮ ಪ್ರೀತಿಯ ಅಂಬರೀಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.