ADVERTISEMENT

ಚಕ್ರವರ್ತಿ ಸೂಲಿಬೆಲೆ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ: ಜಗ್ಗೇಶ್

ಕೋಮು ಸೌಹಾರ್ದ ಕದಡುವ ಕೆಲಸ ಮುಂದುವರಿಸಿದರೆ ಸೂಲಿಬೆಲೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ ಹೇಳಿಕೆಗೆ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2023, 11:25 IST
Last Updated 5 ಜೂನ್ 2023, 11:25 IST
ಜಗ್ಗೇಶ್
ಜಗ್ಗೇಶ್    

ಬೆಂಗಳೂರು: ‘ಚಕ್ರವರ್ತಿ ಸೂಲಿಬೆಲೆ ಮತ್ತು ಸಂಘ ಪರಿವಾರದವರು ಕಳೆದ ನಾಲ್ಕು ವರ್ಷ ಹಿಜಾಬ್‌, ಹಲಾಲ್‌, ಆಜಾನ್‌ ಸೇರಿದಂತೆ ಪಠ್ಯಪುಸ್ತಕದಲ್ಲಿ ಮಾಡಿರುವ ಅನಾಹುತವನ್ನು ಸರಿಪಡಿಸುವ ಕೆಲಸ ಕಾಂಗ್ರೆಸ್‌ ಮಾಡಲಿದೆ. ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಮುಂದುವರಿಸಿದರೆ ಸೂಲಿಬೆಲೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಜಯಪುರದಲ್ಲಿ ಭಾನುವಾರ ಎಚ್ಚರಿಕೆ ನೀಡಿದ್ದರು.

ಈ ಕುರಿತು ಟ್ವೀಟ್ ಮಾಡಿ ತಿರುಗೇಟು ನೀಡಿರುವ ನಟ ಹಾಗೂ ರಾಜ್ಯಸಭಾ ಬಿಜೆಪಿ ಸಂಸದ ಜಗ್ಗೇಶ್, ‘ಚಕ್ರವರ್ತಿ ಸೂಲಿಬೆಲೆ ಅವರ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ‘ ಎಂದು ಹೇಳಿದ್ದಾರೆ.

‘ಸೂಲಿಬೆಲಿರವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ, ತತ್ವ, ವಿಚಾರ, ಕೆರೆಕಟ್ಟೆ ಪುನರ್ಜೀವನ, ಪ್ರವಚನದಂತ ಸಾತ್ವಿಕ ಚಿಂತಕ. ಅವರನ್ನು ಜೈಲಿಗೆ ಹಾಕುವೆ ಎಂದರೆ, ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸನ್ಮಾನ್ಯ ಎಂ.ಬಿ. ಪಾಟೀಲ್ ಬಾಯಲ್ಲಿ! ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ?ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ!’ ಎಂದಿದ್ದಾರೆ.

ADVERTISEMENT

ಜಗ್ಗೇಶ್ ಅವರ ಈ ಟ್ವೀಟ್‌ಗೆ ಪರ–ವಿರೋಧ ಚರ್ಚೆಯಾಗುತ್ತಿದೆ.

ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಚಿವರು, ‘ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಜನರ ಭಾವನೆ ಕೆರಳಿಸುವ ಪ್ರಯತ್ನ ನಡೆಯಿತೇ ಹೊರತು, ಜನರ ಬದುಕು ಕಟ್ಟಿಕೊಡುವ ಕೆಲಸ ಆಗಲಿಲ್ಲ. ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು’ ಎಂದು ಆರೋಪಿಸಿದ್ದರು.

‘ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ಕಾಂಗ್ರೆಸ್‌ ಸರ್ಕಾರ ಆದ್ಯತೆ ನೀಡಲಿದೆ. ರಾಜಕೀಯ ಲಾಭಕ್ಕೆ ದ್ವೇಷ ಬಿತ್ತುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.