ADVERTISEMENT

ಸಾರಿಗೆ ನೌಕರರ ಪ್ರತಿಭಟನೆ | ದಬ್ಬಾಳಿಕೆ ಬಿಟ್ಟು ಬೇಡಿಕೆ ಈಡೇರಿಸಿ: ನಟ ಚೇತನ್‌

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 15:12 IST
Last Updated 10 ಏಪ್ರಿಲ್ 2021, 15:12 IST
ಚೇತನ್‌
ಚೇತನ್‌   

ಬೆಂಗಳೂರು: ‘ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಮೇಲೆರಾಜ್ಯ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯ ತರಬೇತಿ ನೌಕರರನ್ನು ವಜಾಗೊಳಿಸುವ ಮೂಲಕ ಮುಷ್ಕರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನೌಕರರು ಇದ್ಯಾವುದಕ್ಕೂ ಬಗ್ಗುವುದಿಲ್ಲ’ ಎಂದು ನಟ ಚೇತನ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ‘ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳ ಪೈಕಿ ಎಂಟನ್ನು ಈಡೇರಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇದು ಸಂಪೂರ್ಣ ಸುಳ್ಳು. 72 ನಿಗಮಗಳ ಪೈಕಿ 70 ನಿಗಮಗಳಿಗೆ ಸರ್ಕಾರವು ಆರನೇ ವೇತನ ಆಯೋಗದ ಅಡಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ಇದರಿಂದ ಹೊರಗಿಟ್ಟಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಸಾರಿಗೆ ನೌಕರರನ್ನು ವಜಾಗೊಳಿಸುವ, ಮನೆ ಖಾಲಿ ಮಾಡಿಸುವ ಹಾಗೂ ವರ್ಗಾವಣೆ ಮಾಡುವ ಮೂಲಕ ಅವರ ಬಲ ಕುಗ್ಗಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ಆಳುವವರ ಈ ತಂತ್ರ ಫಲಿಸುವುದಿಲ್ಲ. ಬಿ.ಎಸ್‌.ಯಡಿಯೂರಪ್ಪನವರ ಸರ್ಕಾರ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಧನಿಕರಿಗೆ ತೆರಿಗೆಯಿಂದ ವಿನಾಯಿತಿ ನೀಡುವ ಈ ಸರ್ಕಾರ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಸರ್ಕಾರದ ಈ ಮೊಂಡು ಹಠದಿಂದಾಗಿಯೇ ಬಿಕ್ಕಟ್ಟು ಉದ್ಭವವಾಗಿದೆ. ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ಸರ್ಕಾರವೇ ನೇರ ಹೊಣೆ’ ಎಂದು ಆರೋಪಿಸಿದರು.

ADVERTISEMENT

‘ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಹೀಗಾಗಿಯೇ ನೌಕರರ ಬೇಡಿಕೆ ಈಡೇರಿಸಲು ಹಿಂದೇಟು ಹಾಕುತ್ತಿದೆ. ನೌಕರರ ಮುಷ್ಕರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬೇಡಿಕೆ ಈಡೇರುವವರೆಗೂ ಅವರ ಜೊತೆಗೆ ಇರುತ್ತೇನೆ. ಕೋಡಿಹಳ್ಳಿ ಚಂದ್ರಶೇಖರ್‌ ಅವರು ರೈತಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರು ಸಾರಿಗೆ ನೌಕರರ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಅವರನ್ನು ಬಂಧಿಸುವ ಮೂಲಕ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸಿದೆ. ಇದು ಖಂಡನಾರ್ಹ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.