ಬೆಂಗಳೂರು: ‘ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರನ್ನು ಚಿತ್ರದುರ್ಗದ ರೇಣುಕಸ್ವಾಮಿ ಮಂಚಕ್ಕೆ ಕರೆದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ಇಂತಹ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಆರೋಪಿ ದರ್ಶನ್ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಅರುಹಿದರು.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಸಲ್ಲಿಸಿರುವ ನಿಯಮಿತ (ರೆಗ್ಯುಲರ್) ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ‘ದರ್ಶನ್ ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ಈಗ ಅವರನ್ನು ವಿಲನ್ ರೀತಿಯಲ್ಲಿ ಕಾಣಲಾಗುತ್ತಿದೆ’ ಎಂದು ಆಕ್ಷೇಪಿಸಿದರು.
‘ರೇಣುಕಸ್ವಾಮಿಯನ್ನು 2024ರ ಜೂನ್ 8ರಂದು ಚಿತ್ರದುರ್ಗದಿಂದ ಅಪಹರಿಸಿ ಕರೆತಂದು ಮಧ್ಯಾಹ್ನ 1 ಗಂಟೆಯಿಂದ 6 ಗಂಟೆ ನಡುವೆ ಪಟ್ಟಣಗೆರೆಯ ಜಯಣ್ಣ ಶೆಡ್‌ನಲ್ಲಿ ಅಂದೇ ಕೊಲೆ ಮಾಡಲಾಗಿದೆ. ಮೃತದೇಹವು ಅಪಾರ್ಟ್‌ಮೆಂಟ್ ಬಳಿ ಜೂನ್ 9ರಂದು ಪತ್ತೆಯಾಗಿದೆ. ಸೆಕ್ಯೂರಿಟಿ ಗಾರ್ಡ್ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಆದರೆ, ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು ಕೊಲೆ ಮಾಡಲಾಗಿಲ್ಲ’ ಎಂದರು.
‘ರೇಣುಕಸ್ವಾಮಿ ಅಪ್ರಾಪ್ತ ವಯಸ್ಸಿನವನೇನೂ ಆಗಿರಲಿಲ್ಲ. ಆತನೇ ಸ್ವತಃ ನನ್ನನ್ನು ಅಪಹರಿಸಲಾಗಿಲ್ಲ ಎಂದು ಆತ ಸಾಯುವುದಕ್ಕೂ ಮುನ್ನ ತಂದೆ ಕಾಶಿನಾಥಯ್ಯ ಮತ್ತು ತಾಯಿಗೆ ಹೇಳಿದ್ದಾರೆ. ಗೆಳೆಯರ ಜೊತೆ ಊಟಕ್ಕೆ ಹೊರ ಹೋಗುತ್ತಿದ್ದೇನೆ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ’ ಎಂದು ಪ್ರತಿಪಾದಿಸಿದರು.
ದಿನದ ಕಲಾಪದ ವೇಳೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಇದೇ 28ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.