ADVERTISEMENT

ಸಹೋದರನ ಕೊಲೆ ಪ್ರಕರಣ: ನ್ಯಾಯಾಂಗ ಬಂಧನಕ್ಕೆ ನಟಿ ಶನಾಯಾ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 13:24 IST
Last Updated 27 ಏಪ್ರಿಲ್ 2021, 13:24 IST
ಶನಾಯಾ ಕಾಟವೆ
ಶನಾಯಾ ಕಾಟವೆ   

ಹುಬ್ಬಳ್ಳಿ: ರಾಕೇಶ ಕಾಟವೆ ಎಂಬುವವರನ್ನು ಕೊಲೆ ಮಾಡಿ, ಅವರ ರುಂಡ ಮತ್ತು ಮುಂಡ ಬೇರ್ಪಡಿಸಿ ಬೇರೆ, ಬೇರೆ ಕಡೆಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ ಸಹೋದರಿ, ನಟಿ ಶನಾಯಾ ಕಾಟವೆ ಸೇರಿದಂತೆ ಎಂಟು ಮಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶನಾಯಾ ಹಾಗೂ ಕೊಲೆ ಆರೋಪಿಯಾಗಿರುವ ನಿಯಾಜ್‌ ಕಟಿಗಾರ ಹೈಸ್ಕೂಲಿನಿಂದಲೇ ಪ್ರೇಮಿಸುತ್ತಿದ್ದರು. ಇದಕ್ಕೆ ಶನಾಯಾ ಸಹೋದರ ರಾಕೇಶ ಕಾಟವೆ ವಿರೋಧ ವ್ಯಕ್ತಪಡಿಸಿದ್ದ. ಹಾಗಾಗಿ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಪಿ. ಕೃಷ್ಣಕಾಂತ ಹೇಳಿದರು.

ಹುಬ್ಬಳ್ಳಿಯ ನಿಯಾಜ್‌ ಅಹ್ಮದ್ ಸೈಫುದ್ದೀನ್ ಕಟಿಗಾರ (21), ತೌಸೀಫ್ ಅಬ್ದುಲ್‌ ರೆಹಮಾನ ಚನ್ನಾಪುರ (21), ಅಲ್ತಾಫ್ ತಾಜುದ್ದೀನ್ ಮುಲ್ಲಾ (24) ಹಾಗೂ ಅಮನ್ ಅಲಿಯಾಸ್ ಮಹಮ್ಮದ್ ಉಮತ್ (19) ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆ ನಂತರಶನಾಯಾ ಜತೆ ಮಲ್ಲಿಕ್, ಫಿರೋಜ್‌, ಸೈಫುದ್ದೀನ್‌ ಅವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕುಪಿತನಾದ ಆರೋಪಿ ನಿಯಾಜ್‌ ಕೊಲೆಗೆ ಸಂಚು ರೂಪಿಸಿದ್ದ. ಮಾತುಕತೆಗಾಗಿ ರಾಕೇಶ ಅವರನ್ನು ಕರೆಸಿ, ಮೂವರು ಸಹಚರರೊಂದಿಗೆ ಹತ್ಯೆ ಮಾಡಿದ್ದ. ಕೃತ್ಯ ತಿಳಿಯದಂತೆ ರುಂಡ ಬೇರ್ಪಡಿಸಿ ದೇವರಗುಡಿಹಾಳದ ವ್ಯಾಪ್ತಿಯಲ್ಲಿ, ಮುಂಡ ಹಾಗೂ ಕೈ– ಕಾಲುಗಳನ್ನು ಕತ್ತರಿಸಿ ಅರೆಬರೆ ಸುಟ್ಟು ಕೇಶ್ವಾಪುರ ಸಮೀಪದ ಸಂಸ್ಕಾರ ಶಾಲೆ ಬಳಿ ಎಸೆದಿದ್ದರು’ ಎಂದು ಹೇಳಿದರು.

ಶನಾಯಾ, ತೆಲುಗಿನಲ್ಲಿ ‘ಇದಂ ಪ್ರೇಮಂ ಜೀವನಂ’, ಕನ್ನಡದಲ್ಲಿ ಒಂದು ಗಂಟೆಯ ಕತೆ ಚಿತ್ರದಲ್ಲಿ ನಟಿಸಿದ್ದಳು. ಅವಳ ನಟನೆಯ ‘ಛೋಟಾ ಬಾಂಬೆ’ ಎಂಬ ಚಿತ್ರ ಬಿಡುಗಡೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.