ADVERTISEMENT

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೊಠಡಿಯೊಳಗೆ ಹೆಚ್ಚುವರಿ ಮಾನಿಟರ್ ನಿಷೇಧ

​ಪ್ರಜಾವಾಣಿ ವಾರ್ತೆ
Published 23 ಮೇ 2024, 15:44 IST
Last Updated 23 ಮೇ 2024, 15:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರನ್ನು ಹೊರತುಪಡಿಸಿ ಇತರೆ ಸಂಬಂಧಿಕರು ಹಾಗೂ ಹೆಚ್ಚುವರಿ ಮಾನಿಟರ್ ಅನ್ನು ನಿಷೇಧಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. 

ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆಗೆ (ಪಿಸಿಪಿಎನ್‍ಡಿಟಿ) ಸಂಬಂಧಿಸಿದ ಕಾರ್ಯಾಗಾರಾದಲ್ಲಿ ರೇಡಿಯಾಲಜಿಸ್ಟ್, ಸೋನಾಲಜಿಸ್ಟ್‌ ಹಾಗೂ ಸ್ತ್ರೀರೋಗ ತಜ್ಞರು ಈ ಬಗ್ಗೆ ಚರ್ಚಿಸಿದ್ದರು. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೊಠಡಿಯೊಳಗೆ ಗರ್ಭಿಣಿಯರ ಜತೆಗೆ ಬರುವ ಸಂಬಂಧಿಗಳು ಅಲ್ಟ್ರಾಸೌಂಡ್ ಕಾರ್ಯವಿಧಾನಗಳ ಫೋಟೊ ಹಾಗೂ ವಿಡಿಯೊ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲವರು ಈ ವಿಡಿಯೊ ಮತ್ತು ಫೋಟೊಗಳನ್ನು ಭ್ರೂಣ ಲಿಂಗ ಪತ್ತೆಗೆ ಬಳಸಿಕೊಳ್ಳುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ, ಈ ಬಗ್ಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ADVERTISEMENT

ಗರ್ಭಿಣಿಯರಿಗೆ ಅಲ್ಟ್ರಾಸೌಂಡ್ ಕಾರ್ಯ‌ವಿಧಾನಗಳನ್ನು ವೀಕ್ಷಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಕೊಠಡಿಗಳಲ್ಲಿ ಹೆಚ್ಚುವರಿ ಮಾನಿಟರ್‌ ಇರಿಸಲಾಗುತ್ತಿತ್ತು. ಈ ರೀತಿ ಮಾನಿಟರ್ ಇರಿಸುವುದು ಹಾಗೂ ಸಂಬಂಧಿಕರಿಗೆ ಕೊಠಡಿಯೊಳಗೆ ಅವಕಾಶ ನೀಡುವುದು ಪಿಸಿಪಿಎನ್‍ಡಿಟಿ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೊಠಡಿಯೊಳಗೆ ಗರ್ಭಿಣಿಯರನ್ನು ಹೊರತುಪಡಿಸಿ ಇತರರಿಗೆ ಅನುಮತಿಯಿಲ್ಲವೆಂಬ ಫಲಕವನ್ನು ಕೊಠಡಿ ಹೊರಗಡೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಕೇಂದ್ರಗಳಿಗೆ ಸೂಚಿಸಲಾಗಿದೆ. 

ಪಿಸಿಪಿಎನ್‍ಡಿಟಿ ಕಾಯ್ದೆಯಡಿ ನೋಂದಾಯಿಸಿರುವ ಎಲ್ಲ ಕೇಂದ್ರಗಳು, ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೊಠಡಿಯೊಳಗೆ ಹೆಚ್ಚುವರಿ ಮಾನಿಟರ್ ಇಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಮಾನಿಟರ್ ಇರಿಸಿರುವುದು ಕಂಡುಬಂದಲ್ಲಿ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.