ADVERTISEMENT

ಪ್ರತಿ ಟನ್‌ ಕಬ್ಬಿಗೆ ಹೆಚ್ಚುವರಿ ₹150 | ಪ್ರತಿಭಟನೆ ಕೈಬಿಟ್ಟ ಕಬ್ಬು ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 21:16 IST
Last Updated 30 ಡಿಸೆಂಬರ್ 2022, 21:16 IST
   

ಬೆಂಗಳೂರು: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಜತೆಗೆ ಹೆಚ್ಚುವರಿಯಾಗಿ ₹ 150 ನೀಡಲು ರಾಜ್ಯ ಸರ್ಕಾರವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 39 ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಕಬ್ಬು ಬೆಳೆಗಾರರು ಶುಕ್ರವಾರ ಸ್ಥಗಿತಗೊಳಿಸಿದರು.‌

ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಎಫ್‌ಆರ್‌ಪಿ ಜತೆಗೆ ಪ್ರತಿ ಟನ್‌ಗೆ ₹ 100 ಹೆಚ್ಚುವರಿ ಹಣ ಪಾವತಿಸಬೇಕು. ಎಥೆನಾಲ್‌ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ಜತೆಗೆ ಪ್ರತಿ ಟನ್‌ಗೆ ₹ 50 ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಆದೇಶಿಸಿದೆ.

ಪ್ರಸ್ತಕ ಸಾಲಿನ ಕಬ್ಬು ನುರಿಸುವ ಹಂಗಾಮು ಮುಗಿದ ಮೇಲೆ ಸಕ್ಕರೆ, ಎಥನಾಲ್‌ ಮತ್ತು ಇತರೆ ಉಪ ಉ‍ತ್ಪನ್ನಗಳ ಮಾರಾಟದಿಂದ ಬರುವ ಅಂತಿಮ ಆದಾಯವನ್ನು ಹಂಚಿಕೆ ಸೂತ್ರದ ಪ್ರಕಾರ ಪರಿಗಣಿಸಿ ಅಂತಿಮ ಕಬ್ಬಿನ ದರ ನಿರ್ಧರಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದ್ದು ಬೆಳೆಗಾರರು ಪ್ರತಿಭಟನೆ ಸ್ಥಗಿತಗೊಳಿಸಿದರು.

ADVERTISEMENT

‘ಈ ಆದೇಶವು ಸ್ವಲ್ಪಮಟ್ಟಿಗೆ ಕಬ್ಬು ಬೆಳೆಗಾರರಿಗೆ ಸಮಾಧಾನ ತರಿಸಿದೆ. ಎಫ್‌ಆರ್‌ಪಿ ದರದ ಜತೆಗೆ ಬೆಳೆಗಾರರಿಗೆ ಹೆಚ್ಚುವರಿಯಾಗಿ ₹ 150 ಸಿಗಲಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು‌.

‘ಸಕ್ಕರೆ ಕಾರ್ಖಾನೆಗಳು ಯಾವುದೆ ಮಾನದಂಡವಿಲ್ಲದೆ ಕಬ್ಬು ಕಟಾವು, ಸಾಗಾಣಿಕೆ ವೆಚ್ಚವನ್ನು ₹ 250ರಿಂದ ₹ 300ಕ್ಕೆ ಏರಿಸಿವೆ. ಆ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ಸರ್ಕಾರ ಭರವಸೆ ನೀಡಿದೆ’ ಎಂದರು. ‘ಬಾಕಿಯಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಒಂದು ತಿಂಗಳು ಸಮಯಾವಕಾಶ ನೀಡುತ್ತೇವೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.