ADVERTISEMENT

ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧದ ದೋಷಾರೋಪ ನಿಗದಿ ಮುಂದೂಡಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 16:25 IST
Last Updated 29 ಆಗಸ್ಟ್ 2024, 16:25 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಪ್ರಕರಣದಲ್ಲಿನ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ’ ಎಂಬ ಆರೋಪದಡಿಯ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್‌ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ ಹಂಗರಹಳ್ಳಿಯ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನದ (ಶ್ರೀ ಮಠ) ಬಾಲ ಮಂಜುನಾಥ ಸ್ವಾಮೀಜಿ (36) ವಿರುದ್ಧ ದೋಷಾರೋಪ ನಿಗದಿಪಡಿಸುವ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ಹೈಕೋರ್ಟ್‌ ಮುಂದೂಡಿ ಆದೇಶಿಸಿದೆ.

ಈ ಸಂಬಂಧ ಎನ್‌.ಮಂಜುನಾಥ ಅಲಿಯಾಸ್‌ ಬಾಲ ಮಂಜುನಾಥ (36) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್‌ ಜೆ.ಚೌಟ, ‘ಪ್ರಕರಣದಲ್ಲಿ ಆರೋಪಿಸಿರುವ ಅಪರಾಧ ಕೃತ್ಯಗಳು ಬಹಳ ವರ್ಷಗಳ ಹಿಂದೆಯೇ ನಡೆದಿವೆ. ಸ್ವಾಮೀಜಿ ವಿರುದ್ಧ ಹುಲಿಯೂರು ದುರ್ಗ ಪೊಲೀಸ್‌ ಠಾಣೆಯಲ್ಲಿ ದ್ವೇಷ ಭಾವನೆಯಿಂದ ಅರ್ಜಿದಾರರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಇದೇ 30ಕ್ಕೆ ವಿಚಾರಣಾ ನ್ಯಾಯಾಲಯ ಅರ್ಜಿದಾರರ ವಿರುದ್ಧ ದೋಷಾರೋಪ ನಿಗದಿಗೆ ಮುದ್ದತು ನೀಡಿದೆ. ಆದ್ದರಿಂದ, ದೋಷಾರೋಪ ನಿಗದಿ ಪ್ರಕ್ರಿಯೆಯನ್ನು ಕೈಬಿಡಲು ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಪ್ರತಿವಾದಿಯಾದ ಹುಲಿಯೂರು ದುರ್ಗ ಠಾಣೆ ಪೊಲೀಸರು ಮತ್ತು ಪ್ರಕರಣದ ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ‘ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲೆ ಲೀಲಾ ಪಿ.ದೇವಾಡಿಗ ವಕಾಲತ್ತು ವಹಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಂಜುನಾಥ ಸ್ವಾಮೀಜಿ ವಿರುದ್ಧ 2024ರ ಮಾರ್ಚ್ 7ರಂದು ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣ ದಾಖಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.