ADVERTISEMENT

ಆಡಳಿತ ಫೆಲೋಶಿಪ್‌: 11 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 4:25 IST
Last Updated 29 ಜೂನ್ 2021, 4:25 IST
ಶಾಲಿನಿ ರಜನೀಶ್‌
ಶಾಲಿನಿ ರಜನೀಶ್‌    

ಬೆಂಗಳೂರು: ರಾಜ್ಯ ಸರ್ಕಾರವು ‘ದಿ ನಡ್ಜ್‌ ಫೌಂಡೇಷನ್‌’ನ ಜ್ಞಾನ ಪಾಲುದಾರಿಕೆಯಲ್ಲಿ ಹಮ್ಮಿಕೊಂಡಿರುವ ‘ಭಾರತೀಯ ಆಡಳಿತ ಫೆಲೋಶಿಪ್‌’ 11 ಇಲಾಖೆಗಳಲ್ಲಿ ಜುಲೈ 1ರಿಂದ ಆರಂಭವಾಗುತ್ತಿದೆ. 11 ಮಂದಿ ವೃತ್ತಿಪರರನ್ನು ಫೆಲೋಗಳಾಗಿ ಆಯ್ಕೆ ಮಾಡಲಾಗಿದೆ.

‘ಈ ಯೋಜನೆಯ ಫೆಲೋಗಳನ್ನು ಆಯ್ಕೆಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. 2,000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 11 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ, ಆರ್ಥಿಕ, ಶಿಕ್ಷಣ, ಪರಸರ ಮತ್ತು ಉದ್ಯಮಶೀಲತಾ ಕ್ಷೇತ್ರಗಳಲ್ಲಿ ಕನಿಷ್ಠ 24 ವರ್ಷಗಳ ಸೇವಾ ಅನುಭವ ಇರುವವರನ್ನೇ ಆಯ್ಕೆ ಮಾಡಲಾಗಿದೆ’ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ತಿಳಿಸಿದ್ದಾರೆ.

ಆಯ್ಕೆಯಾಗಿರುವ 11 ಜನರು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌, ಕೃಷಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಇ– ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಪಿನ್‌ ಸಿಂಗ್‌, ತೋಟಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್‌, ಕೌಶಲಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ರವಿಕುಮಾರ್‌ ಸುರಪುರ್‌, ಯೋಜನಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.