ADVERTISEMENT

ಹಿಮಬೆಟ್ಟಗಳಲ್ಲಿ ಕಾರ್ಯಾಚರಣೆಗೆ ಈ ಡ್ರೋನ್

ಗಣಪತಿ ಶರ್ಮಾ
Published 23 ಫೆಬ್ರುವರಿ 2019, 9:54 IST
Last Updated 23 ಫೆಬ್ರುವರಿ 2019, 9:54 IST
‘ರೋಟರಿ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್
‘ರೋಟರಿ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್   

ಬೆಂಗಳೂರು:ಸುಮಾರು ಮೂರು ವರ್ಷಗಳ ಹಿಂದೆ ಕರ್ನಾಟಕದ ಲ್ಯಾನ್ಸ್‌ ನಾಯಕ್ ಹನುಮಂತಪ್ಪ ಕೊಪ್ಪದ್ ಸೇರಿದಂತೆ 10 ಯೋಧರು ಸಿಯಾಚಿನ್‌ನಲ್ಲಿ ಹಿಮಪಾತದಡಿ ಹೂತು ಹುತಾತ್ಮರಾದ ಸಂದರ್ಭದಲ್ಲಿ ಸೇನೆಯು ಅತ್ಯಾಧುನಿಕ ಸಲಕರಣೆ ಮತ್ತು ತಂತ್ರಜ್ಞಾನದ ಕೊರತೆ ಎದುರಿಸುತ್ತಿರುವ ಬಗ್ಗೆ ಚರ್ಚೆಯಾಗಿತ್ತು. ಬಳಿಕ ಆ ವಿಷಯ ಹಳೆಯದಾಗುತ್ತಾ ಬಂತು. ಆದರೆ, ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್‌ಎಎಲ್) ಮಾತ್ರ ಮರೆತು ಸುಮ್ಮನಾಗಲಿಲ್ಲ.

ಸಿಯಾಚಿನ್‌ನಂತಹ ಹಿಮಾಚ್ಛಾದಿತ, ಅತೀವ ಚಳಿಯಿಂದ ಕೂಡಿದ ಪ್ರದೇಶಗಳಲ್ಲಿ ಯೋಧರ ನೆರವಿಲ್ಲದೆ ಮತ್ತು ಕೇವಲ ಪ್ರೋಗ್ರಾಮಿಂಗ್ ಮೂಲಕವೇ ಸ್ವಯಂಚಾಲಿತವಾಗಿ ಕಾರ್ಯಾಚರಿಸಬಲ್ಲಂತಹ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾಯಿತು. ಇದರ ಫಲವಾಗಿ ಕೈಗೊಂಡ ಯೋಜನೆಯ ಮೊದಲ ಹಂತದಲ್ಲಿ ಸಿದ್ಧವಾಗಿರುವುದೇ ‘ರೋಟರಿ ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ (ಆರ್‌ಯುಎವಿ) ಎಂಬ ಸ್ವಯಂಚಾಲಿತ ಡ್ರೋನ್‌ನ ಮಾದರಿ.

ಅತ್ಯುನ್ನತ ಗಿರಿ ಶಿಖರಗಳಲ್ಲಿ ಹಾಗೂ ದುರ್ಗಮ ಪ‍್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವುದು ಇದರ ವಿಶೇಷ. ಸ್ವಯಂಚಾಲಿತವಾಗಿ ಟೇಕಾಫ್, ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಈ ಡ್ರೋನ್‌ಗಿದೆ.

ADVERTISEMENT

‘ಸಿಯಾಚಿನ್‌ನಂತಹ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲ ಸ್ವಯಂಚಾಲಿತ ಡ್ರೋನ್, ವಿಮಾನಗಳ ಅವಶ್ಯಕತೆ ಭಾರತೀಯ ಸೇನೆಗೆ ಇದೆ. ಆದರೆ, ವಿದೇಶಿ ಕಂಪನಿಗಳಿಂದ ನಿರೀಕ್ಷೆಗೆ ತಕ್ಕಂತಹ ಡ್ರೋನ್‌, ಜೆಟ್‌ಗಳು ದೊರೆಯುತ್ತಿಲ್ಲ. ಹೀಗಾಗಿಆರ್‌ಯುಎವಿ ಮಾದರಿ ಅಭಿವೃದ್ಧಿಪಡಿಸಿದ್ದೇವೆ. ಇದನ್ನು ಅಭಿವೃದ್ಧಿಪಡಿಸಲು ಅನುಮತಿ ಕೋರಿ ಶೀಘ್ರದಲ್ಲೇ ಭಾರತೀಯ ಸೇನೆಗೆ ಪ್ರಸ್ತಾವ ಸಲ್ಲಿಸಲಾಗುವುದು. ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದುಡ್ರೋನ್‌ನ ಯೋಜನಾ ನಿರ್ವಾಹಕ ವರದರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸ್ವಯಂಚಾಲಿತ ಡ್ರೋನ್ ನಿರ್ಮಾಣಕ್ಕೆ ಅಂದಾಜು ₹40ರಿಂದ ₹50 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ಇದಕ್ಕಿಂತಲೂ ಹೆಚ್ಚು ಸಾಮರ್ಥ್ಯದ, ಹೆಚ್ಚು ಕ್ಷಮತೆ ಹೊಂದಿರುವ ಸ್ವಯಂಚಾಲಿತ ಡ್ರೋನ್, ಜೆಟ್‌ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಚ್‌ಎಎಲ್ ಕಾರ್ಯಪ್ರವೃತ್ತವಾಗಿದೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

ಸಾಮರ್ಥ್ಯ
*
200 ಕಿಲೋ ಮೀಟರ್ ಹಾರಾಟ, ಕಾರ್ಯಾಚರಣೆ

* ಸತತ 6 ಗಂಟೆ ಹಾರಾಟ

* ಗಂಟೆಗೆ ಗರಿಷ್ಠ 200 ಕಿಲೋಮೀಟರ್ ವೇಗದಲ್ಲಿ ಹಾರಾಟ

* 40 ಕಿಲೋ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು

* ಹಗಲು ಹಾಗೂ ರಾತ್ರಿ ಕಾರ್ಯಾಚರಣೆ ನಡೆಸಬಲ್ಲದು

ಶತ್ರುಗಳ ಡ್ರೋನ್ ಪತ್ತೆಹಚ್ಚುವ ಗಾರ್ಡ್‌!
ಶತ್ರು ರಾಷ್ಟ್ರಗಳ ಡ್ರೋನ್‌ ದಾಳಿಯಿಂದ ಪಾರಾಗುವ ಸಲುವಾಗಿಯೇ ‘ಡ್ರೋನ್ ಗಾರ್ಡ್‌ ಸಿಸ್ಟಂ’ ಒಂದನ್ನು ಅಭಿವೃದ್ಧಿಪಡಿಸಿದೆ ಭಾರತ್ ಎಲೆಕ್ಟ್ರಾನಿಕ್ಸ್.ಹಗಲು ಮತ್ತು ರಾತ್ರಿ ಕಾರ್ಯನಿರ್ವಹಿಸಬಲ್ಲ ಕ್ಯಾಮರಾ ಇರುವ ಈ ಗಾರ್ಡ್‌ 4–5 ಕಿಲೋ ಮೀಟರ್‌ ದೂರದಿಂದಲೇ ವೈರಿಗಳ ಡ್ರೋನ್‌ ಅನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ಏವಿಯಾನಿಕ್ಸ್‌ ವಿಭಾಗದ ಸಹಾಯಕ ವ್ಯವಸ್ಥಾಪಕ ಎಚ್.ಎಚ್. ಅರುಣ್ ಕುಮಾರ್ ತಿಳಿಸಿದ್ದಾರೆ.

ಪೋಏರ್‌ನಿಂದ ಹೈಬ್ರಿಡ್ ಡ್ರೋನ್: ಅತಿ ಹೆಚ್ಚು ಭಾರ ಎತ್ತಬಲ್ಲ ಹೈಬ್ರಿಡ್ ಡ್ರೋನ್‌ಗಳನ್ನು ಪೋಏರ್ ಕಂಪನಿ ಅಭಿವೃದ್ಧಿಪಡಿಸಿದೆ. ಏರೋ ಇಂಡಿಯಾದಲ್ಲಿ ಈ ಡ್ರೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕಣ್ಗಾವಲು, ರಕ್ಷಣಾ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಿದೆ ಪೋಏರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.