ADVERTISEMENT

ಏರೋ ಇಂಡಿಯಾ 2023: ಡ್ರೋನ್‌ಗಳ ಸಂತೆ!

ಸರಕು ಹೊತ್ತು 300 ಕಿ.ಮೀ ಸಾಗಬಲ್ಲ ಡ್ರೋನ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 20:20 IST
Last Updated 16 ಫೆಬ್ರುವರಿ 2023, 20:20 IST
ಆರ್ಟ್‌ಪಾರ್ಕ್ ಕಂಪನಿಯ ಡ್ರೋನ್
ಆರ್ಟ್‌ಪಾರ್ಕ್ ಕಂಪನಿಯ ಡ್ರೋನ್   

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಡ್ರೋನ್‌ಗಳ ಸಂತೆಯೇ ಏರ್ಪಟ್ಟಿದೆ. ಸರಕು ಸಾಗಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ತರಹೇವಾರಿ ಡ್ರೋನ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, 300 ಕಿಲೋ ಮೀಟರ್‌ ಸಾಗುವ ಸಾಮರ್ಥ್ಯದ ಡ್ರೋನ್‌ಗಳೂ ಇವೆ.

ರಕ್ಷಣಾ ಇಲಾಖೆಯ ವಿವಿಧ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಈ ಅತ್ಯಾಧುನಿಕ ಡ್ರೋನ್‌ಗಳನ್ನು ತಯಾರಿಸಿವೆ.

ಆರ್ಟ್‌ಪಾರ್ಕ್‌ ಕಂಪನಿ ಸದ್ಯ 2.5 ಕೆ.ಜಿ ಹೊರುವ ಬ್ಯಾಟರಿ ಆಧಾರಿತ ಡ್ರೋನ್ ಸಿದ್ಧಪಡಿಸಿ ಏರೋ ಇಂಡಿಯಾ–2023ರಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ‌ಗಂಟೆಗೆ ಗರಿಷ್ಠ 100 ಕಿಲೋ ಮೀಟರ್ ವೇಗದಲ್ಲಿ ಸಾಗಲಿದ್ದು, ಮೂರು ಗಂಟೆಗಳ ಕಾಲ ಹಾರಾಡುವ ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ADVERTISEMENT

‘ನಮ್ಮ ಕಂಪನಿಯ ಎರಡನೇ ಅವತರಣಿಕೆಯ ಡ್ರೋನ್ ಕೂಡ ಸಿದ್ಧವಾಗಿದ್ದು, ಗರಿಷ್ಠ 25 ಕೆ.ಜಿ. ತೂಕದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಇದಕ್ಕಿದೆ. ಗಂಟೆಗೆ ಗರಿಷ್ಠ 144 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲಿದ್ದು, ಸಂಪೂರ್ಣ ಎಲೆಕ್ಟ್ರಿಕ್ ಆಧಾರಿತವಾಗಿದೆ. ಸರಕು ಹೊತ್ತು 300 ಕಿಲೋ ಮೀಟರ್ ಸಾಗಬಲ್ಲ ಸಾಮರ್ಥ್ಯ ಹೊಂದಿದೆ’ ಎಂದು ಕಂಪನಿ ಸಹ ಎಂಜಿನಿಯರ್‌ ಶರತ್‌ ರವಿ ತಿಳಿಸಿದರು.

‘ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತಾಂತ್ರಿಕ ಸಹಕಾರ ಪಡೆದು ಡ್ರೋನ್ ಅಭಿವೃದ್ಧಿಪಡಿಸಲಾಗಿದೆ. ಸ್ಯಾಟಲೈಟ್ ಆಧಾರಿತ ನಿಯಂತ್ರಣ ಕೊಠಡಿಯಲ್ಲೇ ಕುಳಿತು ಈ ಡ್ರೋನ್‌ಗಳನ್ನು ಚಾಲನೆ ಮಾಡಬಹುದಾಗಿದೆ’ ಎಂದರು.

ಈಗ ಎರಡೂ ಡ್ರೋನ್‌ಗಳು ಸಿದ್ಧವಾಗಿದ್ದು, ಖರೀದಿಸಲು ಬೇಡಿಕೆ ಕೂಡ ಬರುತ್ತಿದೆ. ಆದರೆ, ಇನ್ನೂ ಮಾರುಕಟ್ಟೆಗೆ ಲಭ್ಯವಾಗಿಲ್ಲ. ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಹೇಳಿದರು.

ಇದಲ್ಲದೇ, 225 ಕೆ.ಜಿ. ತೂಕದ ವಸ್ತುಗಳನ್ನು ಹೊತ್ತು ಸಾಗುವ ಡ್ರೋನ್ ಕೂಡ ಸಿದ್ಧವಾಗುತ್ತಿದೆ. ಇದನ್ನು ಏರ್ ಆಂಬುಲೆನ್ಸ್ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಲಾಗುತ್ತಿದೆ. ಒಬ್ಬ ರೋಗಿಯನ್ನು ಹೊತ್ತು ಆಸ್ಪತ್ರೆಗೆ ಸಾಗಿಸಬಲ್ಲ ಸಾಮರ್ಥ್ಯವನ್ನು ಈ ಡ್ರೋನ್ ಹೊಂದಿದೆ. ಎರಡು ಗಂಟೆಗಳಲ್ಲಿ 300ರಿಂದ 400 ಕಿಲೋ ಮೀಟರ್ ಕ್ರಮಿಸಲಿದ್ದು, ಈ ಡ್ರೋನ್ ಮಾರುಕಟ್ಟೆಗೆ ಬರಲು ಇನ್ನೂ ಕನಿಷ್ಠ ಮೂರು ವರ್ಷ ಬೇಕಾಗಲಿದೆ ಎಂದು ಅವರು ವಿವರಿಸಿದರು.

ಡ್ರೋನ್‌ ರಕ್ಷಿಸುವ ಪ್ಯಾರಾಚೂಟ್‌
ಡ್ರೋನ್‌ ರಕ್ಷಣೆಗೂ ಪ್ಯಾರಾಚೂಟ್ ವ್ಯವಸ್ಥೆಯನ್ನು ರಕ್ಷಣಾ ಇಲಾಖೆಯ ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ ತಯಾರಿಸಿದೆ.

ಯಾವುದೇ ಅಪಾಯ ಅಥವಾ ಅನಾಹುತಗಳನ್ನು ಎದುರಿಸಿದ ಸಂದರ್ಭದಲ್ಲಿ ಈ ಪ್ಯಾರಾಚೂಟ್‌ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಈ ಕಂಪನಿ ತಯಾರಿಸುತ್ತಿರುವ ಪ್ಯಾರಾಚೂಟ್‌ಗಳು ಈಗಾಗಲೇ 15 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

‘ಭಾರತದಲ್ಲಿ ಡ್ರೋನ್‌ ರಕ್ಷಣೆಗೆ ಪ್ಯಾರಾಚ್ಯೂಟ್‌ ತಯಾರಿಸಿರುವುದು ಮೊದಲ ಬಾರಿಯಾಗಿದೆ. ಡ್ರೋನ್‌ಗಳ ಗಾತ್ರ, ತೂಕ ಇತ್ಯಾದಿ ಅಗತ್ಯಗಳನ್ನು ತಯಾರಿ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಈ ಪ್ಯಾರಾಚೂಟ್‌ ಅನ್ನು ಡ್ರೋನ್‌ನಲ್ಲೇ ಅಳವಡಿಸಲಾಗುತ್ತದೆ’ ಎಂದು ಕಂಪನಿಯ ಮಾರುಕಟ್ಟೆ ಮುಖ್ಯಸ್ಥ ಡಾ. ವಶಿಷ್ಠ ಹೇಳುತ್ತಾರೆ.

‘ಈ ಪ್ಯಾರಾಚೂಟ್‌ ನೆರವಿನಿಂದ ನಿರ್ದಿಷ್ಟ ಸ್ಥಳಕ್ಕೆ ನಿಧಾನವಾಗಿ ಡ್ರೋನ್‌ಗಳನ್ನು ಕೆಳಗೆ ಇಳಿಸಬಹುದು. ಜತೆಗೆ, ಡ್ರೋನ್‌ ಮೂಲಕ ನಿಗದಿಪಡಿಸಿದ ಸ್ಥಳದಲ್ಲಿ ಬಾಂಬ್‌ ಸ್ಫೋಟಿಸಲು ಸಹ ಈ ಪ್ಯಾರಾಚ್ಯೂಟ್‌ ಅನುಕೂಲ ಕಲ್ಪಿಸಲಿದೆ’ ಎಂದು ವಿವರಿಸಿದರು.


ಡ್ರೋನ್‌ನಲ್ಲಿ ‘ಎ.ಕೆ.–47’

‘ಎ.ಕೆ.–47’ ಗನ್‌ ಅಳವಡಿಸಿ ನಿರ್ದಿಷ್ಟ ಮತ್ತು ನಿಖರವಾದ ಸ್ಥಳದ ಮೇಲೆ ಗುರಿ ಇರಿಸುವ ಡ್ರೋನ್‌ ಅನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಮ್ಯೂನಿಷನ್ಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ ಅಭಿವೃದ್ಧಿಪಡಿಸಿದೆ.


ನ್ಯಾನೋ ತಂತ್ರಜ್ಞಾನ ಬಳಕೆ

ನ್ಯಾನೋ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಿರುವ ಡ್ರೋನ್‌ ಅನ್ನು ರಹಸ್ಯ ಕಾರ್ಯಾಚರಣೆಗೂ ಬಳಸಬಹುದಾಗಿದೆ. ಬೆಂಗಳೂರಿನ ‘ನೊಪೊ’ ಕಂಪನಿ ಇಂತಹ ಡ್ರೋನ್‌ ಅಭಿವೃದ್ಧಿಪಡಿಸಿದೆ. ನ್ಯಾನೊ ಲೇಪನದ ಡ್ರೋನ್‌, ಕಪ್ಪು ಬಣ್ಣದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.