ADVERTISEMENT

6 ವರ್ಷದ ನಂತರ ಆರಂಭಗೊಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಹಿರಿಯೂರು ತಾಲ್ಲೂಕಿನ ಯಳಗೊಂಡನಹಳ್ಳಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST
ಸೋಮವಾರ 12 ಮಕ್ಕಳ ಸೇರ್ಪಡೆಯೊಂದಿಗೆ ಶಾಲೆ ಪುನರಾರಂಭಗೊಂಡಿತು.
ಸೋಮವಾರ 12 ಮಕ್ಕಳ ಸೇರ್ಪಡೆಯೊಂದಿಗೆ ಶಾಲೆ ಪುನರಾರಂಭಗೊಂಡಿತು.   

ಹಿರಿಯೂರು: ವಿದ್ಯಾರ್ಥಿಗಳ ಹಾಜರಾತಿ ಕೊರತೆಯಿಂದ ಆರು ವರ್ಷಗಳ ಹಿಂದೆ ಮುಚ್ಚಿದ್ದ ತಾಲ್ಲೂಕಿನ ಯಳಗೊಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದು ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾಮಸ್ಥರ ಸಹಕಾರದಿಂದ ಪುನರಾರಂಭಗೊಂಡಿದೆ.

‘ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರ ನಿರಾಸಕ್ತಿ. ಶಿಕ್ಷಕರ ಅಲಕ್ಷ್ಯದಿಂದ 2012-13ರಲ್ಲಿ ಶಾಲೆಯನ್ನುಮುಚ್ಚಲಾಗಿತ್ತು. ಇಲ್ಲಿ ಒಂದರಿಂದ ಆರನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿತ್ತು. ಶಾಲೆಯನ್ನು ಉಳಿಸಿಕೊಳ್ಳುವತ್ತ ಗಂಭೀರ ಪ್ರಯತ್ನ ನಡೆದಿರಲಿಲ್ಲ. ಈಗ ಗ್ರಾಮಸ್ಥರು ಹಾಗೂ ಪೋಷಕರ ಪ್ರೋತ್ಸಾಹದಿಂದ 12 ಮಕ್ಕಳು ಸೇರಿದ್ದು, ಶಾಲೆ ಮತ್ತೆ ಆರಂಭಗೊಂಡಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ. ನಟರಾಜ್ ಹೇಳಿದರು.

‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಯೋಜನೆಯಡಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ, ಬಿಸಿಯೂಟ, ವಿದ್ಯಾರ್ಥಿವೇತನ ಎಲ್ಲವೂ ದೊರೆಯಲಿದೆ. ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸುವ ಮೂಲಕ ಗುಣಮಟ್ಟದ ಶಿಕ್ಷಣ ಪಡೆಯಲು ಪೋಷಕರು ಸಹಕರಿಸಬೇಕು. ಸರ್ಕಾರಿ ಶಾಲೆಗಳು ಇದ್ದರೆಷ್ಟು, ಮುಚ್ಚಿದರೆಷ್ಟು ಎಂಬ ಮನೋಭಾವವನ್ನು ಶಿಕ್ಷಕರು ಬಿಟ್ಟು, ಮುಂದಿನ ವರ್ಷ ಮಕ್ಕಳ ಸಂಖ್ಯೆ ಪ್ರತಿ ತರಗತಿಗೆ 24 ಆಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಸೂಚಿಸಿದರು.

ADVERTISEMENT

‘ಗ್ರಾಮದಲ್ಲಿನ ಸರ್ಕಾರಿ ಶಾಲೆ ಮುಚ್ಚಿದ್ದಕ್ಕೆ ಸ್ಥಳೀಯ ಯುವಕರಲ್ಲಿ ತೀವ್ರ ಅಸಮಾಧಾನ ಇತ್ತು. ಸ್ಥಿತಿವಂತರು ನಗರದ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದರು. ಆದರೆ ಬಡ ಮಕ್ಕಳು ಶಿಕ್ಷಣ ವಂಚಿತರಾಗಿದ್ದರು. ಬಿಇಒ ಹಾಗೂ ಅಧಿಕಾರಿಗಳ ಪ್ರಯತ್ನದಿಂದ ಮುಚ್ಚಿದ್ದ ಶಾಲೆ ಮತ್ತೆ ಆರಂಭಗೊಂಡಿದೆ’ ಎಂದು ಗ್ರಾಮದ ಮುಖಂಡ ವೀರಮಲ್ಲೇಗೌಡ ಸಂತಸ ವ್ಯಕ್ತಪಡಿಸಿದರು.

ಶಾಲೆ ಪ್ರಾರಂಭೋತ್ಸವ ಸಮಾರಂಭದಲ್ಲಿ ಶಿಕ್ಷಣ ಸಂಯೋಜಕರಾದ ಶಶಿಧರ್, ಲೋಹಿತ್, ಸಿಆರ್ ಪಿ ಲೋಕಮ್ಮ, ಯಶೋದಮ್ಮ, ಗ್ರಾಮದ ಮುಖಂಡರಾದ ಎಲ್. ಮೋಹನ್, ವೀರೇಂದ್ರ, ನಾಗೇಶ್, ಗುರುಸಿದ್ದಪ್ಪ, ನಾರಾಯಣಪ್ಪ, ಲೋಕಣ್ಣ, ಮಂಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.