ADVERTISEMENT

ಪ್ರವಾಹ ಸಂತ್ರಸ್ತರು: ಊರಿಗೆ ‘ಆಸರೆ’ ಆಗಿದ್ದವರೇ ಈಗ ನಿರಾಶ್ರಿತರು!

ಮಲಪ್ರಭೆ ಮುನಿಸಿಗೆ ತುತ್ತಾಗಿರುವ ದೇಸಾಯಿ ಕುಟುಂಬದ ಸದಸ್ಯರು

ವೆಂಕಟೇಶ್ ಜಿ.ಎಚ್
Published 28 ಆಗಸ್ಟ್ 2019, 20:16 IST
Last Updated 28 ಆಗಸ್ಟ್ 2019, 20:16 IST
ಮಲಪ್ರಭೆ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿರುವ ಬಾಗಲಕೋಟೆ ತಾಲ್ಲೂಕಿನ ಇಂಗಳಗಿಯ ದೇಸಾಯಿ ಕುಟುಂಬ ಗ್ರಾಮದ ಶಂಕರಪ್ಪ ಮನೆಯಲ್ಲಿ ಆಶ್ರಯ ಪಡೆದಿದೆಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ
ಮಲಪ್ರಭೆ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿರುವ ಬಾಗಲಕೋಟೆ ತಾಲ್ಲೂಕಿನ ಇಂಗಳಗಿಯ ದೇಸಾಯಿ ಕುಟುಂಬ ಗ್ರಾಮದ ಶಂಕರಪ್ಪ ಮನೆಯಲ್ಲಿ ಆಶ್ರಯ ಪಡೆದಿದೆಪ್ರಜಾವಾಣಿ ಚಿತ್ರ: ಮಂಜುನಾಥ ಗೋಡೆಪ್ಪನವರ   

ಬಾಗಲಕೋಟೆ: 2009ರ ಪ್ರವಾಹದ ವೇಳೆ ಊರಿನವರಿಗೆ ನೆಲೆ ಕಲ್ಪಿಸಲು ಜಾಗ ಕೊಟ್ಟಿದ್ದ ತಾಲ್ಲೂಕಿನ ಇಂಗಳಗಿಯ ದೇಸಾಯಿ ಕುಟುಂಬವೇ ಈಗ ಮಲಪ್ರಭೆ ಮುನಿಸಿಗೆ ತುತ್ತಾಗಿದೆ. ಮನೆ– ಮಠ ಕಳೆದುಕೊಂಡು ಮತ್ತೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದೆ.

ಹಿಂದೊಮ್ಮೆ ಇಂಗಳಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ (ಕೇಸನೂರ, ಭಗವತಿ, ಮುಡಪೂಜಿ, ಆನದಿನ್ನಿ)ದೇಸಗತಿಯನ್ನು (ಒಡೆತನ) ಅಣ್ಣಾರಾವ್ ಎನ್.ದೇಶಪಾಂಡೆ (ದೇಸಾಯಿ) ಕುಟುಂಬ ಹೊಂದಿತ್ತು. ಈಗ ಅವರೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಲ್ಲಿ ಗ್ರಾಮದ 20ಕ್ಕೂ ಹೆಚ್ಚು ಕುಟುಂಬ ಸಂತ್ರಸ್ತವಾಗಿವೆ. ಅವರಲ್ಲಿ ಅಣ್ಣಾರಾವ್ ಮಕ್ಕಳಾದ ಅಶೋಕ ಹಾಗೂ ಹನುಮಂತ ಕೂಡಾ ಸೇರಿದ್ದಾರೆ. ಅವರಿಗೆ ಗ್ರಾಮದ ಶಂಕ್ರಪ್ಪ ರಡ್ಡೇರ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ.

ಮುಖ್ಯಮಂತ್ರಿ ಸನ್ಮಾನ ಮಾಡಿದ್ದರು:

ADVERTISEMENT

ಅಣ್ಣಾರಾವ್ 1963ರಲ್ಲಿ ಇಂಗಳಗಿ ಹೊರವಲಯದ ಗುಡ್ಡದ ಪಕ್ಕದಲ್ಲಿನ ತಮ್ಮ 24 ಎಕರೆ ಜಮೀನನ್ನು ಊರಿನವರಿಗೆ ದಾನ ಕೊಟ್ಟಿದ್ದರು. ದಶಕದ ಹಿಂದೆ ಮಲಪ್ರಭೆಯಲ್ಲಿ ಪ್ರವಾಹ ಬಂದಾಗ, ಸರ್ಕಾರ ಅರ್ಧ ಊರನ್ನು ಅಲ್ಲಿಗೆ ಸ್ಥಳಾಂತರಿಸಿಆಸರೆ ಮನೆಗಳನ್ನು ಕಟ್ಟಿಕೊಟ್ಟಿದೆ. ಅಲ್ಲೊಂದು ಸರ್ಕಾರಿ ಶಾಲೆಯೂ ಇದೆ.

ಆಗ ಊರಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅವರು ದೇಸಾಯಿ ಕುಟುಂಬದ ನೆರವು ಶ್ಲಾಘಿಸಿ, ಸಹೋದರರನ್ನು ಸನ್ಮಾನಿಸಿದ್ದರು.

ಈಗ ಆ ಕುಟುಂಬದ ಒಡೆತನದಲ್ಲಿ ಗ್ರಾಮದ ಬಳಿಯ ಬೋಳು ಗುಡ್ಡ ಮಾತ್ರ ಇದೆ. ಅಶೋಕ ಹಾಗೂ ಹನುಮಂತ ದೇಶಪಾಂಡೆ ಇಬ್ಬರೂ ಇಂಗಳಗಿ ಹಾಗೂ ಸಮೀಪದ ಕಡಿವಾಲದಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂಚೆ ಇಲಾಖೆಯ ಗೌರವಧನವೇ ಅವರ ಬದುಕಿಗೆ ಆಧಾರ.

‘ಹೊಳಿ ಬಂದ್ ದೊಡ್ಡ ತೊಂದರೆ ಆಗೇತ್ರಿ, ಹೊಲ ಟೆನೆನ್ಸಿ ಕಾಯ್ದೆಗೆ ಹೋಗೇತ್ರಿ. ಈಗ ಇದ್ದ ಮನೆಯೂ ಹೋಯ್ತು.ಕಂಗಾಲು ಆಗೇವಿ’ ಎಂದು ಹನುಮಂತ ಅವರ ಪತ್ನಿ ಜಯಶ್ರೀ ಹೇಳಿದರು.

‘ನಮ್ ಕುಟುಂಬದ್ದು ಹೆಸರು ದೊಡ್ಡದಿದೆ. ದೇಸಾಯೇರು ಅಂತಾ ಮರ್ಯಾದೆ ಕೊಡ್ತಾರೆ. ಆದರ ಬದುಕು ಇಲ್ರಿ, ನಮ್ಮೋರು ಅನ್ನೋರು ಯಾರೂ ಸಹಾಯಕ್ಕೆ ಬರೋವಲ್ರು. ಪ್ಯಾಟಿಗೆ ಬರ್ರಿ, ಬಾಡಿಗೆ ಮನ್ಯಾಗ ಇರ್ರಿ ಅಂತ ಸಂಬಂಧಿಕರು ಕರೀತಾರ. ಆದರ ಹಿರಿಯರು ಬಾಳಿ ಬದುಕಿದ ಊರು. ಬಿಟ್ಟು ಹೋಗಾಕ ಮನಸ್ಸಿಲ್ಲ’ ಎಂದು ಹನುಮಂತ ಬೇಸರ ವ್ಯಕ್ತಪಡಿಸಿದರು.

‘ಅವ್ರು ನಮ್ಮೂರ ದೇಸಾಯೇರು. ನಾವೆಲ್ಲಾ ಅವರ ಆಸ್ತಿಯಾಗ (ಜಾಗ) ಅದೀವಿ. ಆದ್ರೂ ಅವರನ್ನ ಯಾರೂ ಬಾ ಅನ್ನಾವಲ್ರು. ಅದಕ್ಕ ನಮ್ ಮನೀಗ ಕರ್ಕೊಂಡು ಬಂದು ಕೋಲಿ (ಕೊಠಡಿ) ಬಿಟ್ಟುಕೊಟ್ಟೇನ್ರಿ’ ಎಂದು ಶಂಕ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.