ADVERTISEMENT

ಅಗ್ನಿಪಥ ಯೋಜನೆ ವಿರುದ್ಧ ಕಾಂಗ್ರೆಸ್‌ ಹೋರಾಟ ನಿರಂತರ: ಡಿ.ಕೆ.ಶಿವಕುಮಾರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2022, 14:13 IST
Last Updated 25 ಜೂನ್ 2022, 14:13 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕೇಂದ್ರ ಸರ್ಕಾರವು ಅಗ್ನಿಪಥ ಯೋಜನೆಯನ್ನು ಹಿಂಪಡೆದು ಮೊದಲು ಜಾರಿಯಲ್ಲಿದ್ದ ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ‘ನಿರುದ್ಯೋಗ ಪಿಡುಗಿಗೆ ಮುನ್ನುಡಿ ಬರೆದ ಕೇಂದ್ರ ಸರ್ಕಾರ ಈಗ ಅಗ್ನಿಪಥ ಹೆಸರಲ್ಲಿ ಯುವಕರಿಗೆ ಅನ್ಯಾಯವೆಸಗುತ್ತಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸುತ್ತದೆ. ಬಿಜೆಪಿ ಸರ್ಕಾರಕ್ಕೆ ದೇಶದ ಯುವಕರ ಭವಿಷ್ಯದ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಬಿಜೆಪಿ ನಾಯಕರ ಮಕ್ಕಳು ಉನ್ನತ ಕೆಲಸಗಳನ್ನು ಮಾಡಬೇಕು, ಅದೇ ಬಡವರ ಮಕ್ಕಳು ಮಾತ್ರ ಸೆಕ್ಯೂರಿಟಿ ಗಾರ್ಡ್‌ಗಳಾಗಿರಬೇಕಾ? ಇದೇನಾ ನಿಮ್ಮ ಅಗ್ನಿಪಥ ಯೋಜನೆಯ ಅನುಕೂಲ? 4 ವರ್ಷದ ನಂತರ ನಿವೃತ್ತಿ ಪಡೆದ ಮಕ್ಕಳ ಭವಿಷ್ಯ ಏನಾಗಬೇಡ? ನಿಮ್ಮ ದುರಾಡಳಿತವನ್ನು ಮುಚ್ಚಿಡುವುದಕ್ಕೆ ನಮ್ಮ ದೇಶದ ಯುವಕರ ಭವಿಷ್ಯವನ್ನೇ ಪಣಕ್ಕಿಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಅಗ್ನಿಪಥ ಯೋಜನೆಯನ್ನು ಹಿಂಪಡೆದು ಮೊದಲು ಜಾರಿಯಲ್ಲಿದ್ದ ಸೇನಾ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ನಮ್ಮ ದೇಶದ ಯುವಕರ ಭವಿಷ್ಯವನ್ನು ಹಾಳು ಮಾಡಲು ನಾವು ಬಿಡುವುದಿಲ್ಲ. ಕೇಂದ್ರ ಸರ್ಕಾರದ ಅನೀತಿಗಳಿಗೆ ನಾವು ಪೂರ್ಣ ವಿರಾಮ ಇಡಲೇಬೇಕಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.