ADVERTISEMENT

ಕೃಷಿ ಸೀಟುಗಳಿಗಾಗಿ ‘ಶ್ರೀಮಂತ’ರಾಗುವ ರೈತರು!

ಕೃಷಿಕರ ಕೋಟಾದಡಿ ಅರ್ಜಿ ಸಲ್ಲಿಸಿದ ತೆರಿಗೆ ಪಾವತಿಸುವ ವ್ಯಕ್ತಿ

ಎಸ್.ರವಿಪ್ರಕಾಶ್
Published 16 ಮೇ 2019, 20:15 IST
Last Updated 16 ಮೇ 2019, 20:15 IST
   

ಬೆಂಗಳೂರು: ಕೃಷಿಕರ ಆದಾಯ ಕುಸಿದು ಹೋಗಿದೆ, ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ ಎಂಬ ದೊಡ್ಡ ಮಟ್ಟದ ಕೂಗು ದೇಶದ ಎಲ್ಲೆಡೆ ಕೇಳಿ ಬರುತ್ತಿದೆ.

ಅಚ್ಚರಿ ಎಂದರೆ, 1ಎಕರೆರಾಗಿ, ಜೋಳ ಬೆಳೆಯುವ ಖುಷ್ಕಿ ಭೂಮಿಯಲ್ಲಿ ₹10 ರಿಂದ ₹15 ಲಕ್ಷ ಕೃಷಿ ಆದಾಯ ಬರುತ್ತದೆ ಎಂದರೆ ನಂಬಲು ಸಾಧ್ಯವೇ?

ನಿಜ, ಕೃಷಿ ವಿಶ್ವವಿದ್ಯಾಲಯದಲ್ಲಿ ‘ಕೃಷಿಕರ ಕೋಟಾ’ದಡಿ ಸೀಟು ಗಿಟ್ಟಿಸಲು ‘ರೈತರು’ ನೀಡುತ್ತಿರುವ ಕೃಷಿ ಆದಾಯ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸುತ್ತಿರುವ ಆದಾಯದ ಮಾಹಿತಿ ಹುಬ್ಬೇರಿಸುವಂತಿದೆ.

ADVERTISEMENT

ಕೃಷಿ ಕೋಟಾದ ಸೀಟುಗಳನ್ನು ಗಿಟ್ಟಿಸಲು ಸರ್ಕಾರಿ, ಖಾಸಗಿ ನೌಕರಿಯಲ್ಲಿರುವವರು, ಸ್ವಂತ ವ್ಯವಹಾರ ನಡೆಸುತ್ತಿರುವವರು ವಾಮ ಮಾರ್ಗ ಅನುಸರಿಸುತ್ತಿರುವ ಬಗ್ಗೆ ರಾಜ್ಯದ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ಅಧಿಕಾರಿಗಳು ‘ಪ್ರಜಾವಾಣಿ’ಗೆ ಖಚಿತ ಮಾಹಿತಿ ನೀಡಿದ್ದಾರೆ. ಸೀಟು ಗಿಟ್ಟಿಸಲು ಸಲ್ಲಿಸಿರುವ ದಾಖಲೆಗಳು ಪತ್ರಿಕೆಗೆ ಲಭ್ಯವಾಗಿವೆ.

ರಾಜ್ಯದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕ ಕೋರ್ಸ್‌ಗಳಿಗೆ ಕೃಷಿಕರ ಕೋಟಾದಡಿ ಶೇ 40 ರಷ್ಟು ಮೀಸಲಾತಿ ಇದೆ. ಕೃಷಿಕ ಕುಟುಂಬಗಳ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ.

ಅಭ್ಯರ್ಥಿಗಳು ತಾವು ಕೃಷಿಕ ಕುಟುಂಬಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸಲು ಪ್ರಾಯೋಗಿಕ ಪರೀಕ್ಷೆಗೆ ಮೊದಲು ಕೃಷಿಗೆ ಸಂಬಂಧಿಸಿದಂತೆ ನಾಲ್ಕೈದು ಪ್ರಮಾಣ ಪತ್ರ ಸಲ್ಲಿಸಬೇಕು. ಅವುಗಳೆಂದರೆ, ವ್ಯವ ಸಾಯಗಾರರ ಪ್ರಮಾಣಪತ್ರ–3 (ಅವಿಭಾಜ್ಯ ಕುಟುಂಬವಾದಲ್ಲಿ ಕಂದಾಯ ಇಲಾಖೆ ಒದಗಿಸುವ ವಂಶವೃಕ್ಷ ಪ್ರಮಾಣ ಪತ್ರ), ವ್ಯವಸಾಯ/ಕೃಷಿ ಆದಾಯದ ಪ್ರಮಾಣ ಪತ್ರ, ವೇತನ ಧೃಡೀಕರಣ ಪ್ರಮಾಣಪತ್ರ (ಜತೆಗೆ ನೌಕರಿ ಇದ್ದಲ್ಲಿ ಅದರ ಆದಾಯ ವನ್ನೂ ನಮೂದಿಸಬೇಕು), ಖಾಸಗಿ ವೃತ್ತಿಯಿಂದ ಆದಾಯ ಪತ್ರ(ಸ್ವಂತ ವ್ಯವಹಾರದ ಆದಾಯ ನಮೂದಿಸಬೇಕು).

ನಿಯಮಗಳ ಪ್ರಕಾರ, ನೌಕರಿ ಆದಾಯಕ್ಕಿಂತ ಕೃಷಿ ಆದಾಯ ಹೆಚ್ಚು ಇದ್ದರೆ, ಕೃಷಿ ವೃತ್ತಿಯೇ ಪ್ರಧಾನ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ನೌಕರರು ಹಾಗೂ ವಾಣಿಜ್ಯೋದ್ಯಮ ನಡೆಸುವವರು ಸೀಟು ಗಿಟ್ಟಿಸಲೆಂದು ಕೃಷಿ ಭೂಮಿಯ ಆದಾಯವನ್ನು ಹೆಚ್ಚು ತೋರಿಸುತ್ತಿದ್ದಾರೆ. ವೇತನ ₹6 ಲಕ್ಷ ಇದ್ದರೆ, ಕೃಷಿ ಆದಾಯ ₹18 ಲಕ್ಷ ತೋರಿಸುತ್ತಾರೆ. ಇದಕ್ಕೆ ಪೂರಕವಾಗಿ ಅಫಿಡವಿಟ್‌ ಕೂಡ ಸಲ್ಲಿಸುತ್ತಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯವೊಂದರ ಅಧಿಕಾರಿಯೊಬ್ಬರು ತಿಳಿಸಿದರು.

ವಾರ್ಷಿಕ ₹1.7 ಲಕ್ಷ ಆದಾಯ ತೆರಿಗೆ ಪಾವತಿಸುತ್ತಿರುವ ವ್ಯಕ್ತಿಯೊಬ್ಬರು ಕೃಷಿಕರ ಕೋಟಾದಡಿ ಅರ್ಜಿ ಸಲ್ಲಿಸಿದ್ದಾರೆ. ಇವರು ತಮ್ಮ ಆದಾಯದ ಮೂಲ ತೋರಿಸಿಲ್ಲ. ಇವರು ವಾಣಿಜ್ಯೋದ್ಯಮಿ ಎಂಬ ಮಾಹಿತಿಯೂ ಇದೆ. ಇಂತಹ ಹಲವು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ಜ್ಞಾನಕ್ಕಾಗಿ ಕ್ರಾಷ್‌ ಕೋರ್ಸ್‌

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧಗೊಳಿಸಲು ವಿಶೇಷ ಕೋರ್ಸ್‌ ಕೂಡ ನಡೆಸಲಾಗುತ್ತಿದೆ. 15 ದಿನಗಳ ಈ ಕೋರ್ಸ್‌ಗೆ ಪ್ರತಿ ವಿದ್ಯಾರ್ಥಿಯಿಂದ ₹15 ಸಾವಿರದಿಂದ ₹20 ಸಾವಿರದವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ರಾಗಿ, ಜೋಳ, ಭತ್ತ ಮುಂತಾದ ಕೃಷಿ ಉತ್ಪನ್ನಗಳನ್ನು ಗುರುತಿಸುವ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್‌ ನಡೆಸುವ ವ್ಯಕ್ತಿ ಪ್ರಾಯೋಗಿಕ ಪರೀಕ್ಷಾ ಸೀಸನ್‌ನಲ್ಲಿ ಅಂದರೆ 15 –20 ದಿನಗಳಲ್ಲಿ ಕನಿಷ್ಠ ₹15 ಲಕ್ಷ ಹಣ ಮಾಡುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.