ADVERTISEMENT

ಮೈಸೂರು: ಬರಡು ಭೂಮಿಯಲ್ಲಿ ಕೃಷಿಗೆ ಎಂಜಿನಿಯರ್‌ಗಳ ಸಿದ್ಧತೆ

ರೈತರಿಂದ ಭೂಮಿ ಪಡೆದು ಬಾಳೆ ಬೆಳೆಯಲು ಮುಂದಾದ ಎಂಜಿನಿಯರ್‌ಗಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 21:19 IST
Last Updated 23 ಸೆಪ್ಟೆಂಬರ್ 2021, 21:19 IST
ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ಬರಡು ಭೂಮಿಯನ್ನು ಯಂತ್ರದ ಸಹಾಯದಿಂದ ಹದಗೊಳಿಸುವ ಪ್ರಯತ್ನ ನಡೆದಿದೆ
ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ಬರಡು ಭೂಮಿಯನ್ನು ಯಂತ್ರದ ಸಹಾಯದಿಂದ ಹದಗೊಳಿಸುವ ಪ್ರಯತ್ನ ನಡೆದಿದೆ   

ಜಯಪುರ (ಮೈಸೂರು ತಾಲ್ಲೂಕು): ಪಾಳು ಬಿದ್ದ ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ, ರೈತರಿಗೆ ಆದಾಯ ತಂದುಕೊಡಲುಎಂಜಿನಿಯರ್‌ಗಳಿಬ್ಬರು ‘ಪ್ರಾಜೆಕ್ಟ್‌ ಹಗ್‌ ಕಂಪನಿ’ ಸ್ಥಾಪಿಸಿದ್ದಾರೆ. ಹೋಬಳಿಯ ದಾರಿಪುರ ಗ್ರಾಮದಲ್ಲಿ ಪ್ರಾಯೋಗಿಕವಾಗಿ 10 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲು ಸಿದ್ಧತೆ ನಡೆಸಿದ್ದಾರೆ.

ಮೈಸೂರು ನಿವಾಸಿಗಳಾದ ಸೋಮಸುಂದರ್ ಹಾಗೂ ಲೆವಿನ್ ಲಾರೆನ್ಸ್ ಕಂಪನಿಯ ಸ್ಥಾಪಕರು. ಪ್ರಗತಿಪರ ಕೃಷಿಕ ಶರವಣ ಅವರ ಮಾರ್ಗದರ್ಶನದಲ್ಲಿ ಕೃಷಿ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ. ಕಂಪನಿಗೆ ಶರವಣ ಅವರನ್ನೇ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಬರಡು ಭೂಮಿ ಪಡೆದು, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ ಬೆಳೆ ಬೆಳೆಯಲು ಬಿತ್ತನೆ ಬೀಜ, ಗೊಬ್ಬರ, ಕೃಷಿ ಪರಿಕರಗಳು, ಕೂಲಿಕಾರ್ಮಿಕರ ವೆಚ್ಚವನ್ನೂ ಭರಿಸಿ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನೂ ಕಂಪನಿಯೇ ಒದಗಿಸಲಿದೆ. ರೈತ. ಜಮೀನಿನ ಬೆಳೆಯನ್ನು ನೋಡಿಕೊಳ್ಳಬೇಕಷ್ಟೇ. ಬಂದ ಆದಾಯದಲ್ಲಿ ಶೇ 50ರಷ್ಟನ್ನು ರೈತರಿಗೆ ನೀಡಲಾಗುತ್ತದೆ.

ADVERTISEMENT

‘ಕೇಂದ್ರ ಸರ್ಕಾರದ ‘ಒಂದು ಜಿಲ್ಲೆ– ಒಂದು ಬೆಳೆ’ಯ ಮಾರ್ಗಸೂಚಿಯಡಿ ಮೈಸೂರು ಜಿಲ್ಲೆಗೆ ‘ಬಾಳೆ’ ಬೆಳೆ ನೀಡಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ 10 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬರಡಾಗಿರುವ ಭೂಮಿಗಳನ್ನು ಗುರುತಿಸಿ ರೈತರು ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ರೈತರು ವಾರ್ಷಿಕ ಕನಿಷ್ಠ ₹2 ಲಕ್ಷ ಆದಾಯ ಪಡೆಯಬಹುದು’ ಎಂದು ಲೆವಿನ್ ಲಾರೆನ್ಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ನಿಂದಾಗಿ ಅನೇಕ ರೈತರು ಕೃಷಿಯಿಂದ ವಿಮುಖರಾಗಿದ್ದಾರೆ. ಪ್ರಾಜೆಕ್ಟ್‌ ಹಗ್‌ ಕಂಪನಿಯು ಅಂಥವರನ್ನು ಗುರುತಿಸಿ ಉತ್ತೇಜನ ನೀಡಿದೆ. ಅವರೇ ಖರ್ಚು ಭರಿಸಿ, ಅರ್ಧ ಆದಾಯ ನೀಡುವುದು ಒಳ್ಳೆಯ ಕಲ್ಪನೆ. ಅದರಿಂದ ರೈತರಿಗೆ ಅನುಕೂಲವಾಗಲಿದೆ’ ಎಂದು ದಾರಿಪುರ ಗ್ರಾಮದ ರೈತ ಗುರು ಸಂತಸ ವ್ಯಕ್ತಪಡಿಸಿದರು.

‘ಬರಡು ಭೂಮಿಯನ್ನು ಹಸನುಗೊಳಿಸಿ ಬೆಳೆ ತೆಗೆಯಲು ಮುಂದಾಗಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಕಾರ್ಯ ಮಾದರಿಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ.ರುದ್ರೇಶ್ ಶ್ಲಾಘಿಸಿದ್ದಾರೆ.

‘ರೈತರ ಆದಾಯ ದ್ವಿಗುಣ’
‘ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿದ್ದು, ಸಾವಯವ ಕೃಷಿಗೂ ಒತ್ತು ನೀಡಲಾಗುತ್ತದೆ. ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಯೋಜಿಸಲಾಗಿದೆ. ರೈತರಿಗೆ ನುರಿತ ಕೃಷಿ ತಂತ್ರಜ್ಞರಿಂದ ಮಾರ್ಗದರ್ಶನ ದೊರಕಿಸುವುದರ ಜೊತೆಗೆ ಹವಾಗುಣಕ್ಕೆ ಅನುಗುಣವಾಗಿ ಬೆಳೆ ಪದ್ಧತಿಯನ್ನು ನಿರ್ಧರಿಸಲಾಗುವುದು’ ಎಂದು ಪ್ರಾಜೆಕ್ಟ್ ಹಗ್ ಕಂಪನಿ ಮುಖ್ಯಸ್ಥ ಶರವಣ್ ತಿಳಿಸಿದರು.

**

15 ಎಂಜಿನಿಯರ್‌ಗಳು ಕೃಷಿಗೆ ಆಸಕ್ತಿ ತೋರಿಸಿದ್ದಾರೆ. ಮತ್ತಷ್ಟುರೈತರ ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಬಹುದು.
-ಸೋಮಸುಂದರ್, ಪ್ರಾಜೆಕ್ಟ್‌ ಹಗ್‌ ಕಂಪನಿ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.