ADVERTISEMENT

ಹೆಸರು ಕಾಳು ಖರೀದಿ: ಕೃಷಿ ಸಚಿವರು ಜವಾಬ್ದಾರಿಯಿಂದ ಮಾತನಾಡಲಿ–ಪ್ರಹ್ಲಾದ್ ಜೋಶಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 9:39 IST
Last Updated 24 ಸೆಪ್ಟೆಂಬರ್ 2018, 9:39 IST
   

ಹುಬ್ಬಳ್ಳಿ: ‘ಬೆಂಬಲ ಬೆಲೆಯಲ್ಲಿ ಖರೀದಿಸುವ ಹೆಸರು ಕಾಳಿನ ಪ್ರಮಾಣವನ್ನು ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಶಿವಶಂಕರ ರೆಡ್ಡಿ ಅವರು ಬೇಜವಾಬ್ದಾರಿಯಿಂದ ಮಾತನಾಡಬಾರದು’ ಎಂದು ಸಂಸದ ಪ್ರ‌ಹ್ಲಾದ ಜೋಶಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ರೈತರಿಂದ ಖರೀದಿಸುವ ಹೆಸರುಕಾಳಿನ ಪ್ರಮಾಣ ಎಷ್ಟಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿಲ್ಲ. ರಾಜ್ಯ ಸರ್ಕಾರವೇ 4 ಕ್ವಿಂಟಾಲ್‌ಗೆ ನಿಗದಿಪಡಿಸಿದೆ. ಬೇರೆ ಪಕ್ಷದಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಸಚಿವರು ತಪ್ಪು ಮಾಹಿತಿ ನೀಡಬಾರದು. ಕನಿಷ್ಠ 10 ಕ್ವಿಂಟಾಲ್ ಖರೀದಿ ಮಾಡಲು ಸರ್ಕಾರ ವ್ಯವಸ್ಥೆ ಮಾಡಬೇಕು. ರಾಜ್ಯ ಸರ್ಕಾರ ಸಹ ₹100 ಕೋಟಿ ಹಾಕಬೇಕು. ನಾವು ಸಹ ಕೇಂದ್ರ ಸರ್ಕಾರದಿಂದ ಇನ್ನಷ್ಟು ನೆರವು ಕೊಡಿಸಲು ಪ್ರಯತ್ನಿಸುತ್ತೇವೆ’ ಎಂದರು.

‘ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲದ ಕಾರಣ ಬೆಳಿಗ್ಗೆ ಎದ್ದರೆ ರಫೇಲ್ ಹಗರಣ ಎಂದು ಮಾತನಾಡುತ್ತಾರೆ. ಈ ವಿಷಯದ ಬಗ್ಗೆ ಫ್ರಾನ್ಸ್ ಸರ್ಕಾರವೇ ಸ್ಪಷ್ಟನೆ ನೀಡಿದ್ದರೂ ಅವರು ಕೇಳುತ್ತಿಲ್ಲ. ತಲೆಯಲ್ಲಿ ಮಿದುಳಿಲ್ಲದ, ಸ್ವಂತ ಬುದ್ಧಿ ಇಲ್ಲದ ಪೆದ್ದ ರಾಹುಲ್ ಗಾಂಧಿ ವಿಮಾನದ ಬೆಲೆ ₹100, ₹120 ಕೋಟಿ ಎಂದು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ದೇಶದ ರಕ್ಷಣಾ ಸಾಮರ್ಥ್ಯ ವೃದ್ಧಿಸುವುದು ಕಾಂಗ್ರೆಸ್‌ಗೆ ಬೇಕಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.