ADVERTISEMENT

ಕೃಷಿ ಉತ್ಪನ್ನ ವ್ಯವಹಾರ ಕಾನೂನು ವ್ಯಾಪ್ತಿಗೆ

ಮಧ್ಯವರ್ತಿಗಳ ಕಾಟ ತಪ್ಪಿಸಲು ಕೃಷಿ ಬೆಲೆ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:05 IST
Last Updated 4 ಫೆಬ್ರುವರಿ 2019, 19:05 IST

ಬೆಂಗಳೂರು: ಕೃಷಿ ಉತ್ಪನ್ನಗಳ ಬೆಲೆ ನಿಗದಿ ಮತ್ತು ಮಾರಾಟ ಮಾಡುವ ವ್ಯವಹಾರ ಪ್ರಕ್ರಿಯೆಯನ್ನು ಕಾನೂನಿನ ವ್ಯಾಪ್ತಿಗೆ ತರಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಅಭಿಪ್ರಾಯಪಟ್ಟಿದೆ.

ಮಧ್ಯವರ್ತಿಗಳ ಪಾತ್ರ ಮತ್ತು ಕೈವಾಡ ಅತಿಯಾಗಿ ಪಟ್ಟಭದ್ರ ಹಿತಾಸಕ್ತಿ ರೂಪ ಪಡೆದಿರುವಾಗ ಅದರ ನಿಯಂತ್ರಣಕ್ಕೆ ಕಾನೂನಿನ ಅಂತಿಮ ಅಸ್ತ್ರ ಬಳಸುವುದು ಅನಿವಾರ್ಯ ಎಂದು ಆಯೋಗ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸ್ಸಿನಲ್ಲಿ ಹೇಳಿದೆ.

ರಾಜ್ಯದ ರೈತರ ಉತ್ಪನ್ನಗಳಿಗೆ ಖಾತರಿ ಬೆಲೆ ಮತ್ತು ಸದೃಢ ಮಾರುಕಟ್ಟೆ ಕುರಿತ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ADVERTISEMENT

ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ದಿ) ಕಾಯಿದೆ –1966ಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ತಿದ್ದುಪಡಿ ತರಬೇಕು. ಕೇಂದ್ರ ಸರ್ಕಾರ ಘೋಷಿಸುವ ಕನಿಷ್ಠ ಬೆಂಬಲ ಬೆಲೆ ಅಥವಾ ಉತ್ಪಾದನಾ ವೆಚ್ಚದ ಆಧಾರದ ಮೇಲೆ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅಧಿಕೃತ ಕನಿಷ್ಠ ಖರೀದಿ ಬೆಲೆ ನಿಗದಿಪಡಿಸಬೇಕು.ಈ ಅಧಿಕೃತ ಕನಿಷ್ಠ ಖರೀದಿ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನಗಳು ಖರೀದಿಯಾಗದಂತೆ ನಿಯಮ ತರಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಉತ್ಪಾದನೆ ಹೆಚ್ಚಳ: ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಬೇಕು. ಪಡಿತರ ವಿತರಣೆ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸಬೇಕು.ಮಳೆ ಆಶ್ರಯದ ಭತ್ತದ ಕೃಷಿ ಸದೃಢಗೊಳಿಸುವುದು, ರಾಗಿ ಮತ್ತು ಹಿಂಗಾರು ಜೋಳ ಕೃಷಿ ಅಭಿವೃದ್ಧಿಪಡಿಸಬೇಕು. ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳ ವಿಸ್ತೀರ್ಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ‘ಮಾರುಕಟ್ಟೆ ಭರವಸೆ ಯೋಜನೆ’ಯನ್ನೂ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಶಿಫಾರಸು ಹೇಳಿದೆ.

ತಿಂಗಳೊಳಗೆ ಹಣ ಪಾವತಿ; ತಪ್ಪಿದರೆ ಬಡ್ಡಿ: ದ್ವಿದಳ ಧಾನ್ಯಗಳ ಮಹಾಮಂಡಳ ರಚಿಸಬೇಕು. ರೈತರಿಂದ ಸರ್ಕಾರ ಖರೀದಿಸಿದ ಉತ್ಪನ್ನಗಳ ಮೌಲ್ಯವನ್ನು ಗರಿಷ್ಠ ಒಂದು ತಿಂಗಳೊಳಗೆ ಪಾವತಿಸಬೇಕು. ವಿಳಂಬವಾದಲ್ಲಿ ನಂತರದ ಅವಧಿಗೆ ಬಡ್ಡಿ ಸಮೇತ ಪಾವತಿಸುವಂತಾಗಬೇಕು. ಅವಶ್ಯಕತೆಗನುಗುಣವಾದ ಬೆಲೆ ಸ್ಥಿರೀಕರಣ ನಿಧಿ ಸ್ಥಾಪಿಸಬೇಕು.

ರಾಜ್ಯ ಸರ್ಕಾರ ಕನಿಷ್ಠ ₹ 5 ಸಾವಿರ ಕೋಟಿ ಮೊತ್ತವನ್ನುಬೆಲೆ ಸ್ಥಿರೀಕರಣಕ್ಕಾಗಿ ಆವರ್ತ ನಿಧಿ ಇಡಬೇಕು. ಇದರ ನಿರ್ವಹಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಆಯೋಗ ಹೇಳಿದೆ.

ಗುಂಪು ಮಾರಾಟ ವ್ಯವಸ್ಥೆ ಸದೃಢಗೊಳಿಸಬೇಕು.ಇಸ್ರೇಲ್‌ನ ‘ಕಿಬೂಟ್’ ಹೆಸರಿನ ಸಾಂಘಿಕ ಕೃಷಿ ಮಾದರಿಯನ್ನು ಅನುಷ್ಠಾನಗೊಳಿಸಬೇಕು.ಉತ್ಪಾದನಾ ವೆಚ್ಚ ಇಳಿಸಬೇಕು ಎಂದು ಶಿಫಾರಸು ಮಾಡಿದೆ.

ಓಲಾ ಮಾದರಿಯಲ್ಲಿ ಯಂತ್ರಧಾರಾ

ಕೃಷಿ ಯಂತ್ರಗಳನ್ನು ಹೊಂದಿರುವ ರೈತರ, ಕೃಷಿ ಯಂತ್ರಧಾರಾ ಕೇಂದ್ರಗಳ ಸೇವೆ ಎಲ್ಲ ರೈತರಿಗೆ ಸಿಗುವಂತೆ ಮಾಡಲು ‘ಓಲಾ’ ಕ್ಯಾಬ್‌ ಮಾದರಿಯಲ್ಲಿ ಇಂಟರ್‌ನೆಟ್‌ ಆಧರಿತ ವ್ಯವಸ್ಥೆ ಕಲ್ಪಿಸಬೇಕು. ಕೇರಳ ಮಾದರಿಯಲ್ಲಿ ಶ್ರಮದ ಬ್ಯಾಂಕ್‌ ಸ್ಥಾಪಿಸಬೇಕು. ಸಿರಿಧಾನ್ಯಗಳನ್ನು ಲಾಭದಾಯಕ ಬೆಂಬಲ ಬೆಲೆಯಲ್ಲಿ ಖರೀದಿಸಿ, ಕಾಪ್‍ಕಾಮ್ಸ್ ಮತ್ತಿತರ ವ್ಯವಸ್ಥೆಯ ಮೂಲಕ ವಿತರಿಸಬೇಕು ಎಂದು ಶಿಫಾರಸು ಹೇಳಿದೆ.

**
ಮುಖ್ಯಾಂಶಗಳು

* ನಿಗದಿತ ಬೆಲೆಗಿಂತಲೂ ಕಡಿಮೆ ದರದಲ್ಲಿ ಖರೀದಿಸಿದರೆ ದಂಡ

* ಕೃಷಿ ಭೂಮಿ ಸದ್ಭಳಕೆಗೆ ಪ್ರತ್ಯೇಕ ಮಂಡಳಿಗೆ ಸಲಹೆ

* ಜಿಎಸ್‌ಟಿ ಹೊರೆ ತಪ್ಪಿಸಲು ಕರ ಸುಧಾರಣೆ ಪ್ರಸ್ತಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.