ADVERTISEMENT

ಕೃಷಿ ಪಂಪ್‌ಸೆಟ್‌ ಸಕ್ರಮ: ರೈತರಿಗೆ ಸಿಗದ ಭಾಗ್ಯ!

ಎಂಟು ಜಿಲ್ಲೆಗಳಲ್ಲಿ ಸಮೀಕ್ಷೆ l ಬೆಸ್ಕಾಂ ವ್ಯಾಪ್ತಿಯಲ್ಲಿ ಟೆಂಡರ್‌ ಪ್ರಕ್ರಿಯೆ ವಿಳಂಬ: ತಪ್ಪದ ಅಲೆದಾಟ

ಸಚ್ಚಿದಾನಂದ ಕುರಗುಂದ
Published 18 ಅಕ್ಟೋಬರ್ 2022, 20:37 IST
Last Updated 18 ಅಕ್ಟೋಬರ್ 2022, 20:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಅಕ್ರಮ–ಸಕ್ರಮ ಯೋಜನೆ ಜಾರಿಯಾಗಿದ್ದರೂ ಅನುಷ್ಠಾನ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಪರದಾಡುವಂತಾಗಿದೆ ಎಂದು ರೈತರು ದೂರಿದ್ದಾರೆ.

ಗುಣಮಟ್ಟದ ವಿದ್ಯುತ್‌ ಸಂಪರ್ಕ ಕಲ್ಪಿಸಲು 2005ರಿಂದಲೇ ಜಾರಿಯಾದ ಈ ಯೋಜನೆಯನ್ನು ಸಕಾಲಕ್ಕೆ ಅನುಷ್ಠಾನಗೊಳಿಸುತ್ತಿಲ್ಲ. ವಿದ್ಯುತ್‌ ಕಂಬಗಳು, ಪರಿವರ್ತಕ ಸೇರಿ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಗುತ್ತಿಗೆ ನೀಡುವ ಟೆಂಡರ್‌ ಪ್ರಕ್ರಿಯೆ ನಿಧಾನವಾಗಿದ್ದರಿಂದ ಅಕ್ರಮ–ಸಕ್ರಮ ಯೋಜನೆ ವಿಳಂಬವಾಗಿದೆ.

ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಸಮೀಕ್ಷೆ ಕೈಗೊಂಡಿದ್ದ ಬೆಸ್ಕಾಂ ಇನ್ನೂ 44,134 ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕಾಗಿದೆ ಎಂದು ವರದಿ ಸಿದ್ಧಪಡಿಸಿತ್ತು. ಅತಿ ಹೆಚ್ಚಿನ ಪಂಪ್‌ಸೆಟ್‌ಗಳು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಪತ್ತೆಯಾಗಿದ್ದವು. ಈ ತಾಲ್ಲೂಕುವೊಂದರಲ್ಲೇ 5,501 ಸಕ್ರಮಗೊಳಿಸಬೇಕಾದ ಪಂಪ್‌ಸೆಟ್‌ಗಳಿವೆ.

ADVERTISEMENT

ಅನಧಿಕೃತ ಪಂಪ್‌ಸೆಟ್‌ಗಳನ್ನು ಹೊಂದಿರುವವರು ಒಂದು ಎಚ್‌ಪಿಗೆ ₹1350 ಮತ್ತು ಇತರ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿಗಳ ಹಿರಿತನದ ಆಧಾರದ ಮೇಲೆ ಅಗತ್ಯ ಸೌಲಭ್ಯ ಕಲ್ಪಿಸಲಾಗು
ತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 2005ರ ಮಾರ್ಚ್‌ನಿಂದ 2021ರ ಜುಲೈ 31ರವರೆಗೆ 3.99 ಲಕ್ಷ ಅನಧಿಕೃತ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವಂತೆ ರೈತರು ಅರ್ಜಿ ಸಲ್ಲಿಸಿ ನೋಂದಣಿ ಮಾಡಿದ್ದರು. ಇವುಗಳಲ್ಲಿ 2.48 ಲಕ್ಷ ಪಂಪ್‌ಸೆಟ್‌ಗಳಿಗೆ ಅಗತ್ಯ ಇರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು .

2022ರ ಮಾರ್ಚ್‌ ಅಂತ್ಯಕ್ಕೆ ಸಂಪರ್ಕ ಶುಲ್ಕ ಸೇರಿದಂತೆ ಠೇವಣಿ ಮೊತ್ತ ಪಾವತಿಸಿದ 44,134 ಅನಧಿಕೃತ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಸಂಬಂಧ ವಿದ್ಯುತ್‌ ಮೂಲಸೌಕರ್ಯಗಳನ್ನು ಕಲ್ಪಿಸುವ ಗುತ್ತಿಗೆ ನೀಡಲು 2022ರ ಮೇ ತಿಂಗಳಲ್ಲಿ ಟೆಂಡರ್‌ ಕರೆಯಲಾಗಿತ್ತು.ಈ ಕಾಮಗಾರಿಗಳಿಗೆ ₹886.27 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಉಪವಿಭಾಗವಾರು ಗುತ್ತಿಗೆ ನೀಡಲು ಟೆಂಡರ್‌ ಕರೆಯಲಾಗಿದೆ. ಇನ್ನೆರಡು ತಿಂಗಳಲ್ಲಿ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

ಅರ್ಜಿದಾರರು ₹ 10 ಸಾವಿರ ಸಕ್ರಮ ಶುಲ್ಕ ಮತ್ತು ಠೇವಣಿ ಹಣ ಪಾವತಿಸಿದ್ದರೆ ಜ್ಯೇಷ್ಠತೆ ಆಧಾರದ ಮೇಲೆ ಹಂತ ಹಂತವಾಗಿ ಸಕ್ರಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

‘ಕೆಲವು ರೈತರು ₹1 ಲಕ್ಷದಿಂದ ₹2 ಲಕ್ಷ ರೂಪಾಯಿ ಸ್ವತಃ ವೆಚ್ಚ ಮಾಡಿ ಕಂಬಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ, ಇಷ್ಟು ಹಣ ಭರಿಸುವ ಶಕ್ತಿ ಎಲ್ಲ ರೈತರಿಗೂ ಇರುವುದಿಲ್ಲ. ಅಧಿಕಾರಿಗಳ ಉದಾಸೀನತೆಯಿಂದ ಈ ಯೋಜನೆ ನಿಧಾನವಾಗಿ ಸಾಗುತ್ತಿದೆ’ ಎನ್ನುವುದು ರೈತರು ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.