ADVERTISEMENT

ನಾಳೆಯಿಂದ ಆಗುಂಬೆ ಘಾಟಿ ಸಂಚಾರ ಮುಕ್ತ

ಭಾರಿ ಸರಕು ವಾಹನಗಳಿಗೆ ಜೂನ್ 1ವರೆಗೂ ನಿಷೇಧ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST
ಆಗುಂಬೆ ಘಾಟಿಯಲ್ಲಿ ಕಾಮಗಾರಿ ದೃಶ್ಯ (ಸಂಗ್ರಹ ಚಿತ್ರ)
ಆಗುಂಬೆ ಘಾಟಿಯಲ್ಲಿ ಕಾಮಗಾರಿ ದೃಶ್ಯ (ಸಂಗ್ರಹ ಚಿತ್ರ)   

ಉಡುಪಿ: ಮೇ 16ರಿಂದ ಆಗುಂಬೆ ಘಾಟಿ ಸಂಚಾರ ಭಾಗಶಃ ಮುಕ್ತವಾಗಲಿದೆ. ದ್ವಿಚಕ್ರ, ಕಾರು ಹಾಗೂ ಮಿನಿ ಬಸ್‌ಗಳು ಘಾಟಿಯಲ್ಲಿ ಓಡಾಡಬಹುದು. ಆದರೆ, ಭಾರಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ಇಲ್ಲ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸನ್‌ಸೆಟ್‌ ಪಾಯಿಂಟ್‌ನಲ್ಲಿ ಕ್ರಾಂಕಿಟ್‌ ಕಾಮಗಾರಿ ಕ್ಯೂರಿಂಗ್ ಹಂತದಲ್ಲಿರುವುದರಿಂದ ಭಾರಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಿದರೆ ಅಪಾಯಗಳಾಗುವ ಸಾಧ್ಯತೆಗಳಿವೆ. ಹಾಗಾಗಿ ಜೂನ್ 1ರವರೆಗೂ ವಾಣಿಜ್ಯ ವಾಹನಗಳ ಓಡಾಟಕ್ಕೆ ನಿರ್ಬಂಧ ಮುಂದುವರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ‘ಪ್ರಜಾವಾಣಿ’ಗೆ ಅಧಿಕಾರಿಗಳು ತಿಳಿಸಿದರು.‌

ಕಾಮಗಾರಿ ಅಪೂರ್ಣ:

ADVERTISEMENT

ಘಾಟಿಯ 7ನೇ ತಿರುವಿನಲ್ಲಿ ಕೆಲವು ಮರಗಳನ್ನು ಕಡಿದು ರಸ್ತೆ ಕಾಮಗಾರಿ ನಡೆಸಬೇಕಿತ್ತು. ಆದರೆ, ವನ್ಯಜೀವಿ ಮಂಡಳಿ ಅನುಮತಿ ನೀಡದ ಪರಿಣಾಮ ಕಾಮಗಾರಿ ಮಾಡಿಲ್ಲ. ಈಗ ತಾತ್ಕಾಲಿಕವಾಗಿ ವಾಹನಗಳಿಗೆ ತೊಂದರೆಯಾಗದಂತೆ ರಸ್ತೆಯ ಸುತ್ತಲೂ ಬ್ಯಾರಿಯರ್‌ಗಳನ್ನು ಹಾಕಲಾಗಿದೆ. ಹೊಸದಾಗಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದರು.

7ನೇ ತಿರುವು ಸೇರಿದಂತೆ ಘಾಟಿಯ ಹಲವೆಡೆ ತುರ್ತು ಕಾಮಗಾರಿಗೆ ಅನುಮತಿ ಕೋರಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪತ್ರ ಬರೆಯಲಾಗಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಲವು ತಿಂಗಳು ಬಂದ್ ಆಗಿತ್ತು ಘಾಟಿ:

ಕಳೆದ ಮಳೆಗಾಲದಲ್ಲಿ ಘಾಟಿಯ ಕೆಲವು ತಿರುವುಗಳಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆಗೆ ತೀವ್ರ ಹಾನಿಯಾಗಿತ್ತು. ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆಯ ಅನುಮತಿ ಪಡೆದು ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭವಾಗಿತ್ತು. ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ 2 ಬಾರಿ ವಾಹನಗಳ ನಿಷೇಧ ಅವಧಿಯನ್ನು ವಿಸ್ತರಿಸಲಾಗಿತ್ತು.

ರೋಗಿಗಳಿಗೆ ಅನುಕೂಲ:

ಆಗುಂಬೆ ಘಾಟಿಯು ಕರಾವಳಿ ಹಾಗೂ ಮಲೆನಾಡು ನಡುವಿನ ಪ್ರಮುಖ ಸಂಪರ್ಕ ಕೊಂಡಿ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವೆಡೆಗಳಿಂದ ಚಿಕಿತ್ಸೆ ಪಡೆಯಲು ಉಡುಪಿಗೆ ಬರುವ ರೋಗಿಗಳು ಹೆಚ್ಚಾಗಿ ಘಾಟಿ ಮಾರ್ಗವನ್ನೇ ಬಳಸುತ್ತಿದ್ದರು. ಸಂಚಾರ ನಿಷೇಧದಿಂದ ರೋಗಿಗಳಿಗೆ ತೊಂದರೆಯಾಗಿತ್ತು. ಶಿವಮೊಗ್ಗ–ಮಾಸ್ತಿಕಟ್ಟೆ–ಕುಂದಾಪುರ ಮಾರ್ಗವಾಗಿ ಉಡುಪಿಗೆ ಬಳಸಿಕೊಂಡು ಬರಬೇಕಿತ್ತು. ಈಗ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.