
ಜಿ. ಪರಮೇಶ್ವರ
ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭದ್ರತಾ ತಂತ್ರಾಂಶವನ್ನು ಅಳವಡಿಸಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ವಿಧಾನ ಸಭೆಯಲ್ಲಿ ಹೇಳಿದರು.
‘ಕಾರಾಗೃಹಗಳ ಭದ್ರತೆ ಹಾಗೂ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ, ಬಂದಿಗಳ ಚಲನವಲನಗಳ ಮೇಲೆ ಇನ್ನೂ ಹೆಚ್ಚಿನ ನಿಗಾವಹಿಸಲು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ‘ಎಐ– ಆಡಿಯೊ–ವಿಡಿಯೊ ಅನಾಲಿಟಿಕ್ಸ್ ಸಿಸ್ಟಮ್’ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದನ್ನು ಎಲ್ಲ ಕಾರಾಗೃಹಗಳಿಗೂ ವಿಸ್ತರಿಸಲಾಗುವುದು’ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ನಿಯಮ 69ರ ಅಡಿ ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಪರಮೇಶ್ವರ, ‘ರಾಜ್ಯದ ಯಾವುದೇ ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳು ಇರದಂತೆ ತಪಾಸಣೆ ಮಾಡಿ, ಡಿ.31ರೊಳಗೆ ಎಲ್ಲ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ಕಾರಾಗೃಹ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.
ಬಂದಿಗಳನ್ನು ಎ, ಬಿ, ಸಿ ಮಾದರಿಯಲ್ಲಿ ವರ್ಗೀಕರಿಸಿ, ಸೂಕ್ಷ್ಮವಾಗಿ ಮೇಲ್ವಿಚಾರಣೆ ನಡೆಸಲಾಗುತ್ತದೆ. ನಿಷೇಧಿತ ವಸ್ತುಗಳನ್ನು ಸರಬರಾಜು ಮಾಡುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಿಬ್ಬಂದಿಯ ಕರ್ತವ್ಯದ ಆಡಿಟ್ ಮಾಡಿ, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿನಿತ್ಯ ತಪಾಸಣೆಯಲ್ಲಿ ಎನ್‌ಎಲ್‌ಐಡಿ, ಎಂಇಎಸ್‌ಎ, ಎಚ್‌ಎಚ್‌ಎಂಡಿ, ಡಿಎಸ್‌ಎಂಡಿ ಬಳಸಿ, ದೈಹಿಕ ತಪಾಸಣೆ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಎರಡು ವರ್ಷಗಳಲ್ಲಿ ಡ್ರಗ್ಸ್ ದಂಧೆಕೋರರ ಜೊತೆ ಶಾಮೀಲಾಗಿ, ತಮ್ಮ ವ್ಯಾಪ್ತಿಯಲ್ಲಿ ಡ್ರಗ್ಸ್ ಹಾವಳಿ ತಡೆಯದ 26 ಪೊಲೀಸ್ ಅಧಿಕಾರಿ– ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 88 ಪ್ರಕರಣಗಳಲ್ಲಿ ಪೊಲೀಸರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪರಮೇಶ್ವರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.