ADVERTISEMENT

ಎಐಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿ: ಸಿದ್ನಾಳ

ಗಾಂಧಿ ಕುಟುಂಬದ ವಿರುದ್ಧ ಸಿದ್ನಾಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 13:20 IST
Last Updated 8 ಸೆಪ್ಟೆಂಬರ್ 2020, 13:20 IST
ಎಸ್.ಬಿ. ಸಿದ್ನಾಳ
ಎಸ್.ಬಿ. ಸಿದ್ನಾಳ   

ಬೆಳಗಾವಿ: ‘ಎಐಸಿಸಿ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಸ್.ಬಿ. ಸಿದ್ನಾಳ್ ಆಗ್ರಹಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಕಾರ್ಯಕರ್ತರ ಬೆಂಬಲ ಪಡೆದು ಗೆದ್ದವರನ್ನು ಎಐಸಿಸಿ ಅಧ್ಯಕ್ಷರಾಗಲಿ’ ಎಂದು ಒತ್ತಾಯಿಸಿದರು.

ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಅವರ ಮನೆ ಮಕ್ಕಳು ದೊಡ್ಡವರಾಗುವವರೆಗೂ ನಾವು ಸುಮ್ಮನೆ ಕುಳಿತುಕೊಳ್ಳಬೇಕು. ಅವರ ಮನೆಯ ಕೂಸುಗಳಿಗೂ ನಮಸ್ಕಾರ ಮಾಡಬೇಕು. ಈ ಸಂಸ್ಕೃತಿ ದೊಡ್ಡ ತಪ್ಪು’ ಎಂದರು.

ADVERTISEMENT

‘ಗುಲಾಂನಬಿ ಆಜಾದ್, ಶಶಿ ತರೂರ್, ಕಪಿಲ್ ಸಿಬಿಲ್ ಸೇರಿದಂತೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಸಮರ್ಥ ನಾಯಕರಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕಬೇಕು’ ಎಂದು ಒತ್ತಾಯಿಸಿದರು.

‘ಆಳುವ ಪಕ್ಷವನ್ನು ಪ್ರಶ್ನಿಸುವ ಪಕ್ಷ ಇರಬೇಕಾಗುತ್ತದೆ. ದೇಶದಲ್ಲಿ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ. ಆಗ ಮಾತ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಸಾಧ್ಯವಾಗುತ್ತದೆ’ ಎಂದು ಅಭಿ‍ಪ್ರಾಯಪಟ್ಟರು.

‘ಆರ್‌ಎಸ್ಎಸ್‌ ಮಾದರಿಯಲ್ಲಿ ಕಾಂಗ್ರೆಸ್‌ನಲ್ಲಿ ಸೇವಾದಳವಿದೆ. ಆದರೆ, ಅದು ಸಕ್ರಿಯವಾಗಿಲ್ಲ. ಅದನ್ನು ಸೋನಿಯಾ ಗಾಂಧಿ ಅವರೇ ಹಾಳು ಮಾಡಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ಹಿಂದಿನಿಂದಲೂ ಗಾಂಧಿ ಕುಟುಂಬದ ಹಿಡಿತದಲ್ಲಿದೆ. ಈ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ’ ಎಂದರು.

‘ವಿರೋಧ ಪಕ್ಷದಲ್ಲಿ ಸರಿಯಾದ ನಾಯಕತ್ವವಿಲ್ಲ. ಸರ್ಕಾರದ ವಿರುದ್ಧ ಚಾಟಿ ಬೀಸುವ ವ್ಯಕ್ತಿ ಯಾರೂ ಇಲ್ಲ. ಕಾಂಗ್ರೆಸ್‌ಗೆ 125 ವರ್ಷದ ಇತಿಹಾಸವಿದೆ. ಅದು ದುರ್ಬಲ ಅಥವಾ ಸರ್ವ ನಾಶವಾಗಲು ಬಿಡಬಾರದು. ವಲಸೆ ಬಂದವರಿಂದ ಆ ಪಕ್ಷ ಸಂಘಟನೆ ಮಾಡುವ ಶಕ್ತಿ ಇಲ್ಲ’ ಎಂದು ಹೇಳಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಸಂಘಟನೆಗೆ ಪ್ರಮುಖ ನಾಯಕತ್ವ ಬೇಕಿದೆ‌’ ಎಂದರು.

‘ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ 1980ರಿಂದಲೂ ಪ್ರಸ್ತಾವ ಸಲ್ಲಿಸಿಕೊಂಡು ಬರಲಾಗುತಿತ್ತು. ಆದರೆ, ಆಗ ಆರ್ಥಿಕ ಸಮಸ್ಯೆ ಮೊದಲಾದ ಕಾರಣಗಳಿಂದ ಹೊಸ ರೈಲ್ವೆ ಮಾರ್ಗಗಳನ್ನು ಕೈಬಿಟ್ಟರು. ಈಗ ಕೇಂದ್ರ ರೈಲು ಮಾರ್ಗಕ್ಕೆ ಅನುಮೋದನೆ ನೀಡಿರುವುದನ್ನು ಸ್ವಾಗತಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.