ADVERTISEMENT

ನಾಲ್ಕು ಜಿಲ್ಲೆಗಳಲ್ಲಿ ಮಾಲಿನ್ಯ ಮಟ್ಟ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ವಾಸಯೋಗ್ಯ ರಾಜ್ಯವಾಗಿಸಲು ಜನರೆಲ್ಲರೂ ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:30 IST
Last Updated 20 ನವೆಂಬರ್ 2025, 0:30 IST
<div class="paragraphs"><p> ದಾವಣಗೆರೆ ಜಿಲ್ಲಾಧಿಕಾರಿ ಜಿ. ಗಂಗಾಧರಸ್ವಾಮಿ, ಬೆಳಗಾವಿಯ ಉಕ್ಕಡದ ಮಜದೂರು ನವ ನಿರ್ಮಾಣ ಸಂಘಟನೆಯ ಶಿವಾಜಿ ಕಾಗಣಿಕರ, ಮಂಗಳೂರಿನ ಪ್ರೊ. ಜಿ.ಶ್ರೀನಿಕೇತನ್‌, ಬೆಂಗಳೂರಿನ ಗಣೇಶ್‌ ಶಂಕರ್‌ ಮತ್ತು ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಆರ್‌. ಮಂಜುನಾಥ್‌ ಅವರಿಗೆ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪರಿಸರ’ ಪ್ರಶಸ್ತಿ ಪ್ರದಾನ ಮಾಡಿದರು</p></div>

ದಾವಣಗೆರೆ ಜಿಲ್ಲಾಧಿಕಾರಿ ಜಿ. ಗಂಗಾಧರಸ್ವಾಮಿ, ಬೆಳಗಾವಿಯ ಉಕ್ಕಡದ ಮಜದೂರು ನವ ನಿರ್ಮಾಣ ಸಂಘಟನೆಯ ಶಿವಾಜಿ ಕಾಗಣಿಕರ, ಮಂಗಳೂರಿನ ಪ್ರೊ. ಜಿ.ಶ್ರೀನಿಕೇತನ್‌, ಬೆಂಗಳೂರಿನ ಗಣೇಶ್‌ ಶಂಕರ್‌ ಮತ್ತು ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಆರ್‌. ಮಂಜುನಾಥ್‌ ಅವರಿಗೆ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪರಿಸರ’ ಪ್ರಶಸ್ತಿ ಪ್ರದಾನ ಮಾಡಿದರು

   
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ₹ 1 ಕೋಟಿ ದತ್ತಿ ನಿಧಿ | ಐದು ಪರಿಸರವಾದಿಗಳಿಗೆ ಪ್ರತಿ ವರ್ಷ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ ಪ್ರಶಸ್ತಿ

ಬೆಂಗಳೂರು: ‘ಬೆಂಗಳೂರು, ಹುಬ್ಬಳ್ಳಿ–ಧಾರವಾಡ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಮಾಲಿನ್ಯ ಹೊಂದಿರುವುದು ಆತಂಕಕಾರಿ. ನಮ್ಮ ರಾಜ್ಯವನ್ನು ವಾಸಯೋಗ್ಯವಾಗಿಸಲು ಜನರೆಲ್ಲರೂ ಪರಿಸರ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾ‌ರಂಭದಲ್ಲಿ ರಾಜ್ಯಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ADVERTISEMENT

‘131 ನಗರಗಳು ಹೆಚ್ಚು ಮಾಲಿನ್ಯ ಹೊಂದಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇವುಗಳಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಿವೆ. ಬೆಂಗಳೂರಿನಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಅದನ್ನು ತಡೆಗಟ್ಟಲು, ಎಲ್ಲರೂ ಈಗಿನಿಂದಲೇ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಸಾಲುಮರದ ತಿಮ್ಮಕ್ಕ ಅವರು ಮರ ಗಿಡಗಳನ್ನು ತಮ್ಮ ಮಕ್ಕಳಂತೆ ಬೆಳೆಸಿದ್ದರು. ಈ ಭಾವನೆ ಎಲ್ಲರಲ್ಲೂ ಮೂಡಬೇಕು’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌,  ‘ನಮ್ಮ ಕಾಲದಲ್ಲಿ ಬಾವಿ ಹಾಗೂ ಹೊಳೆಯಿಂದ ನೀರನ್ನು ತರುತ್ತಿದ್ದೆವು. ಈಗ ಒಂದು ಲೀಟರ್‌ ಬಾಟಲಿ ನೀರಿಗೆ ₹30-₹40 ಆಗಿದೆ. ಪರಿಶುದ್ಧ ನೀರು ಇಲ್ಲವಾದರೆ ನಾವು ಇರಲು ಸಾಧ್ಯವಿಲ್ಲ’ಎಂದು ಹೇಳಿದರು.

50 ವಾರ್ಡ್‌ ಪ್ಲಾಸ್ಟಿಕ್ ಮುಕ್ತ: ಬೆಂಗಳೂರಿನಲ್ಲಿ ಈ ವರ್ಷ 50 ವಾರ್ಡ್‌ಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಪಣತೊಡಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

‘ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಯಾವುದೇ ಒತ್ತಡಕ್ಕೆ ಒಳಗಾಗದೆ, ನಿಯಮ–ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಮಾಲಿನ್ಯ ಮುಕ್ತ ರಾಜ್ಯವನ್ನಾಗಿ ಮಾಡಿ, ನಂಬರ್‌ 1 ಮಂಡಳಿ ಆಗಬೇಕು’ ಎಂದರು.

ಸಚಿವರಾದ ದಿನೇಶ್ ಗುಂಡೂರಾವ್, ಎನ್‌. ಚಲುವರಾಯಸ್ವಾಮಿ, ಡಾ. ಎಂ.ಸಿ. ಸುಧಾಕರ್, ಶಾಸಕರಾದ ಡಾ. ಸಿ.ಎನ್‌. ಅಶ್ವಥ್ ನಾರಾಯಣ, ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ನಸೀರ್ ಅಹಮದ್ ಉಪಸ್ಥಿತರಿದ್ದರು.

2030ರ ವೇಳೆಗೆ ಬೆಂಗಳೂರು ಪ್ಲಾಸ್ಟಿಕ್‌ ಮುಕ್ತ

‘ಬೆಂಗಳೂರು ನಗರ ಒಂದರಲ್ಲೇ 900 ಟನ್ ಪ್ಲಾಸ್ಟಿಕ್ ನಿತ್ಯವೂ ಉತ್ಪಾದನೆಯಾಗುತ್ತದೆ. ಇದನ್ನು ಜನ ಅರ್ಥಮಾಡಿಕೊಂಡು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ ಸರ್ಕಾರದ ಜೊತೆ ಕೈಜೋಡಿಸಿದರೆ 2030ರ ಹೊತ್ತಿಗೆ ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಬೆಂಗಳೂರು ‘ತ್ಯಾಜ್ಯ ನಗರ’ ಎಂಬ ಟೀಕೆಗೆ ನಗರ ಗುರಿಯಾಗುತ್ತಿದ್ದು ಪ್ಲಾಸ್ಟಿಕ್ ಮತ್ತು ಕಸ ಮುಕ್ತ ನಗರವಾಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶ’ ಎಂದರು.

‘ಜಲ ಮಾಲಿನ್ಯ ತಡೆಗೆ ಕಠಿಣ ಕ್ರಮ ಅಗತ್ಯ’

‘ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳು (ಎಸ್‌ಟಿಪಿ) ಸರಿಯಾಗಿ ಕೆಲಸ ಮಾಡದೆ ಕೊಳಚೆ ನೀರು ನದಿ ಸೇರುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಮನವಿ ಮಾಡಿದರು. ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ಯಾಜ್ಯದಿಂದ ರಸ್ತೆ ನಿರ್ಮಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಗೃಹ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತಿದೆ. ಇದೇ ರೀತಿ ಎಲ್ಲ ಜಿಲ್ಲಾಡಳಿತಗಳೂ ಕ್ರಮ ಕೈಗೊಳ್ಳಲು ಆದೇಶಿಸಬೇಕು’ ಎಂದರು. ‘ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಿ ಪರಿಸರ ಸಂರಕ್ಷಣೆಯ ಸಾಧಕರಿಗೆ ಪ್ರತಿವರ್ಷ ಪ್ರಶಸ್ತಿ ನೀಡಬೇಕು’ ಎಂಬ ನರೇಂದ್ರಸ್ವಾಮಿ ಅವರ ಮನವಿಗೆ ಸಿದ್ದರಾಮಯ್ಯ ಅವರು ವೇದಿಕೆಯಲ್ಲೇ ಅನುಮೋದನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.