ADVERTISEMENT

ದಲಿತ, ದ್ರಾವಿಡ ಅಸ್ಮಿತೆ ಪ್ರತ್ಯೇಕಿಸುವ ಸಂಚು

7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಲೇಖಕಿ ಡಾ. ಧರಣಿದೇವಿ ಮಾಲಗತ್ತಿ ಆತಂಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 20:16 IST
Last Updated 24 ಜೂನ್ 2018, 20:16 IST
ಸಮ್ಮೇಳನದಲ್ಲಿ ಡಾ. ಸಮತಾ ದೇಶಮಾನೆ ಹಾಗೂ ಡಾ. ಧರಣಿದೇವಿ ಮಾಲಗತ್ತಿ ಪರಸ್ಪರ ಮಾತನಾಡಿಕೊಂಡರು ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ ಡಾ. ಸಮತಾ ದೇಶಮಾನೆ ಹಾಗೂ ಡಾ. ಧರಣಿದೇವಿ ಮಾಲಗತ್ತಿ ಪರಸ್ಪರ ಮಾತನಾಡಿಕೊಂಡರು ಪ್ರಜಾವಾಣಿ ಚಿತ್ರ   

ಧಾರವಾಡ: ‘ದಲಿತ ಅಸ್ಮಿತೆಗೂ, ದ್ರಾವಿಡ ಅಸ್ಮಿತೆಗೂ ಯಾವುದೇ ಸಂಬಂಧವಿಲ್ಲ. ದ್ರಾವಿಡ ಎಂಬುದು ಕಾಲ್ಪನಿಕ ಎಂದು ಹೇಳುವ ಮೂಲಕ ಕೆಲವರು ಅಸ್ಮಿತೆಯನ್ನೇ ಪ್ರತ್ಯೇಕಿಸುವ ದೊಡ್ಡ ಪ್ರಯತ್ನ ನಡೆಸಿದ್ದಾರೆ’ ಎಂದು ಲೇಖಕಿ, ಐಪಿಎಸ್‌ ಅಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಆತಂಕ ವ್ಯಕ್ತಪಡಿಸಿದರು.

ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಭಾನುವಾರ ಇಲ್ಲಿನ ಎನ್ಕೆ ಹನುಮಂತಯ್ಯ ವೇದಿಕೆಯಲ್ಲಿ ಆಯೋಜಿಸಿದ್ದ 7ನೇ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಿಟಿಷರು ತಮ್ಮ ಅನುಕೂಲಕ್ಕೆ ದ್ರಾವಿಡ ಅಸ್ಮಿತೆ ಹುಟ್ಟುಹಾಕಿದರು ಎಂಬ ಕಟ್ಟಕತೆಯನ್ನು ಈಗ ಕೆಲವರು ಹೇಳುತ್ತಿದ್ದಾರೆ. ವಾಸ್ತವದಲ್ಲಿ ದಲಿತ ಮತ್ತು ದ್ರಾವಿಡ ಅಸ್ಮಿತೆಗಳ ನಡುವೆ ಸಾಮ್ಯತೆಗಳಿವೆ. ಬ್ರಿಟಿಷರು ಭಾರತಕ್ಕೆ ಬರುವುದಕ್ಕೂ ಮೊದಲೇ ಕನ್ನಡ ಸಾಹಿತ್ಯದಲ್ಲಿರುವ ಪುರಾವೆಗಳು ಇದಕ್ಕೆ ಸಾಕ್ಷಿ’ ಎಂದರು.

ADVERTISEMENT

‘ಸಮತಾ ಸಮಾಜ ಕಟ್ಟುವ ಚಿಂತನೆ, ತರ್ಕ, ಆಲೋಚನೆಗಳನ್ನು ಯುವ ಜನರಿಗೆ ತಲುಪಿಸಬೇಕಿದೆ. ಇಲ್ಲವಾದಲ್ಲಿ ಇತರರು ಅವರ ಆಲೋಚನೆಗಳನ್ನು ತುಂಬುವ ಅಪಾಯವಿದೆ.ತನ್ನಂತೆ ಪರರೂ ಎಂಬ ಭಾವ ಮೂಡಿದರೆ ಸಮತಾ ಸಮಾಜ ಕಟ್ಟಲು ಸಾಧ್ಯ. ಇದಕ್ಕೆ ಪ್ರಬಲರಲ್ಲಿ ಮಾನವೀಯ ಮೌಲ್ಯಗಳು ಹಾಗೂ ದುರ್ಬಲರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಯಬೇಕು’ ಎಂದರು.

ಸಮ್ಮೇಳನಾಧ್ಯಕ್ಷೆ, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ.ಸಮತಾ ದೇಶಮಾನೆ, ‘ದಲಿತರ ಮೇಲಾಗುವ ದೌರ್ಜನ್ಯ, ಬಹಿಷ್ಕಾರ, ಕೊಲೆ, ಸಾಮೂಹಿಕ ಅತ್ಯಾಚಾರ, ಮಹಿಳೆಯರನ್ನು ಬೆತ್ತಲುಗೊಳಿಸುತ್ತಿರುವ ಘಟನೆಗಳು ತೀರಾ ನೋವಿನ ಸಂಗತಿಗಳು. ಡಾ. ಬಾಬಾಸಾಹೇಬರು ಕಂಡ ಕನಸಿನ ಭಾರತದಲ್ಲಿದ್ದೇವೆಯೇ ಎಂಬ ಅನುಮಾನ ಮೂಡುತ್ತದೆ’ ಎಂದು ಹೇಳಿದರು.

‘ಸಮಾಜವನ್ನು ಎಚ್ಚರಿಸಬೇಕಾದ ಮಾಧ್ಯಮಗಳು ತಮ್ಮತನವನ್ನು ಕಳೆದುಕೊಳ್ಳುತ್ತಿವೆ. ಮಾಧ್ಯಮಗಳು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಧರ್ಮದ ಹೆಸರಿನಲ್ಲಿ ಸೋಗಲಾಡಿ ಸಂಘಟನೆಗಳು ದಲಿತರ ಬದುಕಿನ ಮೇಲೆ ಪ್ರಹಾರ ಮಾಡುತ್ತಿವೆ. ನಮ್ಮ ಅನಕ್ಷರತೆ ಅವರಿಗೆ ಬಂಡವಾಳ
ವಾಗಬಾರದು. ದಬ್ಬಾಳಿಕೆಯನ್ನು ಯುವಜನರು ತಡೆಯಬೇಕು. ಬಾಬಾಸಾಹೇಬರ ಆಶಯದಂತೆ ಶಿಕ್ಷಣವು ಬಡವರ ಅಸ್ತ್ರವಾಗಬೇಕು’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷೆಯನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.