ADVERTISEMENT

ಎಲ್ಲರನ್ನೂ ಒಳಗೊಳ್ಳುವುದೇ ಹವ್ಯಕತ್ವ: ರಾಘವೇಶ್ವರ ಭಾರತಿ ಸ್ವಾಮೀಜಿ

‘ಅಖಿಲ ಹವ್ಯಕ ಮಹಾಸಭಾ’ದ ಅಮೃತ ಮಹೋತ್ಸವಕ್ಕೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:50 IST
Last Updated 28 ಡಿಸೆಂಬರ್ 2018, 19:50 IST
ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬಂದ ಸಚಿವ ಆರ್.ವಿ.ದೇಶಪಾಂಡೆ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ವಿಶ್ವ ಹವ್ಯಕ ಸಮ್ಮೇಳನ ಗೌರವಾಧ್ಯಕ್ಷ ಭೀಮೇಶ್ವರ ಜೋಶಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ್ ಕಜೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬಂದ ಸಚಿವ ಆರ್.ವಿ.ದೇಶಪಾಂಡೆ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ವಿಶ್ವ ಹವ್ಯಕ ಸಮ್ಮೇಳನ ಗೌರವಾಧ್ಯಕ್ಷ ಭೀಮೇಶ್ವರ ಜೋಶಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ್ ಕಜೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಪ್ರತಿ ಸಮುದಾಯವೂ ದೇಶಕ್ಕೆ ಒಂದೊಂದು ಅಂಗವಿದ್ದಂತೆ. ಹವ್ಯಕ ಸಮುದಾಯವೂ ದೇಶದ ಒಂದು ಅಂಗ’ ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

‘ಹವ್ಯಕರು ಸಮಾಜದ ಉತ್ತಮ ಅಂಗವೂ ಹೌದು. ಹವ್ಯಕರಲ್ಲಿನ ವಿದ್ವತ್ತು, ಜ್ಞಾನವನ್ನು ಕಂಡು ಉತ್ತರ ಭಾರತದ ಅಹಿಚ್ಛತ್ರದಿಂದ ಬನವಾಸಿಗೆ ಕರೆತರಲಾಯಿತು’ ಎಂದು ಸ್ವಾಮೀಜಿ ಪ್ರಶಂಸಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಅಖಿಲ ಹವ್ಯಕ ಮಹಾಸಭಾ’ ಸಂಘಟನೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಹವ್ಯಕ ಮಹಾಸಭಾ ಸಂಘಟನೆ ಸಾವಿರದ ಸಂಸ್ಥೆಯಾಗಿ ಬಾಳಲಿ ಎಂದು ಆಶೀರ್ವಾದ ಮಾಡುತ್ತಿದ್ದೇವೆ. ಈ ಸಂಸ್ಥೆ ಸಾಯಲು, ನೋಯಲು ನಾವು ಬಿಡುವುದಿಲ್ಲ. ಪೀಠದ ಕಡೆಯಿಂದ ಈ ಅಭಯ ಸಂಸ್ಥೆಯ ಮೇಲೆ ಇರುತ್ತದೆ’ ಎಂದು ಹೇಳಿದರು.

ಹವ್ಯಕರದ್ದು ಎಲ್ಲರನ್ನೂ ಒಳಗೊಳ್ಳುವ ಸಮಾಜ. ಯಾರನ್ನೂ ಹೊರಗಿಡುವ ಸಮಾಜ ಇದಲ್ಲ. ಎಲ್ಲರನ್ನೂ ಒಳಗೊಂಡು ಬಾಳುವುದೇ ಹವ್ಯಕತ್ವ ಎಂದು ಸ್ವಾಮೀಜಿ ವ್ಯಾಖ್ಯಾನಿಸಿದರು.

‘ಹವ್ಯಕರು ಕೈಜೋಡಿಸಲಿ’: ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ್ದ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ‘ಶೇಕಡ 100ರಷ್ಟು ಸಾಕ್ಷರತೆ ಸಾಧಿಸಿರುವ, ಭಿಕ್ಷುಕರೇ ಇಲ್ಲದ ಸಮಾಜ ಹವ್ಯಕರದ್ದು’ ಎಂದು ಹೇಳಿದ್ದರು. ತಮ್ಮ ಮಾತಿನಲ್ಲಿ ಇದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ‘ರಾಜ್ಯವನ್ನು ಸಂಪೂರ್ಣ ಸಾಕ್ಷರವಾಗಿಸುವ ಕೆಲಸಕ್ಕೆ ಹವ್ಯಕರು ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

‘ಸಮುದಾಯಗಳು ಸಂಘಟಿತವಾಗುವುದು ತಪ್ಪಲ್ಲ. ಸಮುದಾಯಗಳು ಗಟ್ಟಿಗೊಂಡಾಗ ದೇಶವೂ ಅಭಿವೃದ್ಧಿ ಕಾಣುತ್ತದೆ. ಆದರೆ ಇನ್ನೊಬ್ಬರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ಹವ್ಯಕರು ತಮ್ಮ ಸಮುದಾಯದಲ್ಲಿನ ಪ್ರತಿಭಾನ್ವಿತರನ್ನು ಗುರುತಿಸಿ ಅವರಲ್ಲಿ ರಾಜಕೀಯ ಶಕ್ತಿ ತುಂಬಬೇಕು’ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್. ಸಿಂಧ್ಯ ಅಭಿಪ್ರಾಯಪಟ್ಟರು.

‘ಪಾಟೀಲ್ರೂ ಹವ್ಯಕರೇ...’

‘ಪಾಟೀಲ್ರೂ ಹವ್ಯಕರೇ ಎಂದು ನನ್ನ ಬಳಿ ಸ್ವಾಮೀಜಿ ಹೇಳಿದರು. ಅದನ್ನು ಕೇಳಿ ನನಗೆ ಖುಷಿ ಆಯಿತು. ನಾವೂ ಹವ್ಯಕರಂತೆ ಆಗಬೇಕು’ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಹವ್ಯಕರು ಬಹಳ ಸಮಾಧಾನದ ಬದುಕು ಸಾಗಿಸುತ್ತಾರೆ. ಹವ್ಯಕರು ವಾಸಿಸುವ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಹಗಲು – ರಾತ್ರಿ ನಿರ್ಭಯವಾಗಿ ತಿರುಗಾಡಬಹುದು. ಅಪರಾಧಗಳಿಂದ ಮುಕ್ತವಾಗಿರುವ ಸಮುದಾಯ ಇದು ಎಂದು ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದರು.

ದೇವ, ಮನುಷ್ಯ...

‘ನನ್ನನ್ನು ಕರೆಯದಿದ್ದರೂ ಇತರರನ್ನು ಕರೆ ಎನ್ನುವವ ದೇವರಾಗುತ್ತಾನೆ. ನನ್ನನ್ನೂ ಕರೆ, ಎಲ್ಲರನ್ನೂ ಕರೆ ಎನ್ನುವವ ಮನುಷ್ಯನಾಗುತ್ತಾನೆ. ಆದರೆ, ನನ್ನನ್ನು ಮಾತ್ರ ಕರೆ, ಇನ್ನೊಬ್ಬರನ್ನು ಕರೆಯಬೇಡ ಎನ್ನುವವ ಮನುಷ್ಯತ್ವದಿಂದ ಹೊರಹೋಗುತ್ತಾನೆ’ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಮಾರ್ಮಿಕವಾಗಿ ಹೇಳಿದರು.

‘ಹವ್ಯಕ ಮಹಾಸಭಾದ ಕೆಲಸಗಳಲ್ಲಿ ಮಠ ಎಂದಿಗೂ ಹಸ್ತಕ್ಷೇಪ ನಡೆಸಿಲ್ಲ. ಈ ಸಭೆಗೆ ನಮ್ಮನ್ನು ಕರೆಯಬೇಕು ಎಂದು ನಾವೆಂದೂ ಹೇಳಿಲ್ಲ. ಅವರನ್ನು–ಇವರನ್ನು ಕರೆಯಬೇಡಿ ಎಂದು ಹೇಳುವುದು ಹಾಗಿರಲಿ, ನಮ್ಮನ್ನು ಕರೆಯಿರಿ ಎಂದು ಕೂಡ ಹೇಳಿಲ್ಲ. ಹವ್ಯಕ ಸಮಾಜ ಬೆಳೆಯಬೇಕು, ಒಟ್ಟು ಸಮಾಜವನ್ನು ಅದು ಬೆಳೆಸಬೇಕು. ರಚನಾತ್ಮಕ ಕೆಲಸಗಳಲ್ಲಿ ಮಠವು ಎಂದಿಗೂ ಜೊತೆಯಾಗುತ್ತದೆ’ ಎಂದರು.

‘ಶಂಕರ ಪ್ರಣೀತ ಯತಿಧರ್ಮ ಪಥದಿಂದ ಪತಿತರಾದವರನ್ನು ಹವ್ಯಕ ಸಮ್ಮೇಳನದಿಂದ ದೂರವಿಡಬೇಕು’ ಎಂದು ಶಿರಸಿಯ ಸ್ವರ್ಣವಲ್ಲೀ ಮಠದ ಶಿಷ್ಯವೃಂದ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

**

ಹವ್ಯಕ ಸಮಾಜ ರಾಷ್ಟ್ರಕ್ಕೆ ನೀಡಿದ ದೊಡ್ಡ ಕೊಡುಗೆಯೆಂದರೆ ರಾಮಕೃಷ್ಣ ಹೆಗಡೆ. ಬಹಳ ದೂರದೃಷ್ಟಿ ಹೊಂದಿದ್ದ ನಾಯಕ ಅವರು
- ಆರ್.ವಿ. ದೇಶಪಾಂಡೆ, ಕಂದಾಯ ಸಚಿವ

**

ಬ್ರಾಹ್ಮಣರನ್ನು ನಿಂದಿಸುವುದು ಕೆಲವರಿಗೆ ಶೋಕಿ. ದೂಷಣೆಯ ಮಾತು ಪತ್ರಿಕೆಗಳಲ್ಲಿ ಹೆಡ್‌ಲೈನ್‌ ಆಗಿ ಬರುತ್ತದೆ, ದೂಷಣೆ ಮಾಡಿದವರು ನಾಯಕರಾಗಿಬಿಡುತ್ತಾರೆ
- ಎಚ್. ಹಾಲಪ್ಪ, ಸಾಗರ ಶಾಸಕ

**

ಜಾತಿವಾದ ಮಾಡುವವರಲ್ಲ ಹವ್ಯಕರು ಎಂಬುದನ್ನು ನಾನು ಚುನಾವಣೆಗಳ ಸಂದರ್ಭದಲ್ಲಿ ಕಂಡುಕೊಂಡಿದ್ದೇನೆ
- ಶಿವರಾಮ ಹೆಬ್ಬಾರ್, ಯಲ್ಲಾಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.