
ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಸದಾಶಿವನಗರದಲ್ಲಿರುವ ಮನೆಯಲ್ಲಿ ಶನಿವಾರ ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು.
ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ಅಖಿಲೇಶ್ ಸುದ್ದಿಗಾರರ ಜೊತೆ ಮಾತನಾಡಿ, ‘ಇದು ಸೌಜನ್ಯ ಮತ್ತು ಶಿಷ್ಟಾಚಾರದ ಭೇಟಿ ಅಷ್ಟೇ’ ಎಂದರು.
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಲ್ಲಿನ ಜನರು ಬದಲಾವಣೆ ಬಯಸಿದ್ದರು. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆದರೆ, ಏನಾಯಿತೆಂದು ಗೊತ್ತಿಲ್ಲ’ ಎಂದರು.
‘ಚುನಾವಣೆ ಎದುರಿಸಲು ಬಿಹಾರದ ಜೆಡಿಯು ಸರ್ಕಾರ ಮಾಡಿದ ರೀತಿಯಲ್ಲಿ ನಾವು (ಉತ್ತರ ಪ್ರದೇಶದಲ್ಲಿ) ಘೋಷಣೆಗಳನ್ನು ಮಾಡಬೇಕಿದೆ’ ಎಂದರು.
ಮತ ಕಳವು ಆರೋಪವನ್ನು ಸಮರ್ಥಿಸಿದ ಅಖಿಲೇಶ್, ‘ಉತ್ತರಪ್ರದೇಶದಲ್ಲಿ ಚುನಾವಣೆ ವೇಳೆ ಪೊಲೀಸ್ ಬಲ ಬಳಸಿ ಮತದಾನ ಮಾಡದಂತೆ ತಡೆಯಲಾಗಿತ್ತು. ಬಿಹಾರದಲ್ಲಿ ಹಣ ಕೊಟ್ಟು ಚುನಾವಣೆ ಗೆದ್ದಿದ್ದಾರೆ. ಮುಂದೆ ನಾವು ಕೂಡಾ ಅದೇ ದಾರಿ ಹಿಡಿಯಬೇಕೇ ಎಂಬ ಪ್ರಶ್ನೆಯಿದೆ’ ಎಂದರು.
‘ಕಾಂಗ್ರೆಸ್ ಜೊತೆ ಕೈಜೋಡಿಸಿದರೆ ಅಧಃಪತನ’ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ನಮ್ಮ ಮಿತ್ರ ಪಕ್ಷವೂ ಹೌದು. ಸ್ನೇಹಿತ ಸಂಕಷ್ಟದಲ್ಲಿದ್ದಾಗ ಕೈಬಿಡಬಾರದು. ಮೈತ್ರಿಕೂಟದ ಬಗ್ಗೆ ಈಗ ಮಾತು ಬೇಡ. ಸಮಯ ಬಂದಾಗ ಈ ಬಗ್ಗೆ ಮಾತನಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.