ADVERTISEMENT

ಆಳಂದ ಮತ ಕಳವು: ಸುಭಾಷ್ ಗುತ್ತೇದಾರ್‌ ಮಗ ಅಕ್ರಮದಲ್ಲಿ ಭಾಗಿ– ಎಸ್‌ಐಟಿ

ಆಳಂದದಲ್ಲಿ 5,994 ಮತಗಳ ಅಳಿಸಿ ಹಾಕಿದ್ದ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಸಿದ ಎಸ್ಐಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:44 IST
Last Updated 13 ಡಿಸೆಂಬರ್ 2025, 23:44 IST
<div class="paragraphs"><p>ಸುಭಾಷ್ ಗುತ್ತೇದಾರ್‌&nbsp;</p></div>

ಸುಭಾಷ್ ಗುತ್ತೇದಾರ್‌ 

   

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಮತ ಕಳವು ಪ್ರಕರಣದಲ್ಲಿ ಮಾಜಿ ಶಾಸಕ, ಬಿಜೆಪಿಯ ಪರಾಜಿತ ಅಭ್ಯರ್ಥಿ ಸುಭಾಷ್ ಗುತ್ತೇದಾರ್, ಅವರ ಮಗ ಹರ್ಷಾನಂದ ಗುತ್ತೇದಾರ್‌ ಸೇರಿ ಆರು ಮಂದಿ ಭಾಗಿಯಾಗಿರುವುದನ್ನು ಈ ಬಗ್ಗೆ ತನಿಖೆ ನಡೆಸಿದ ಸಿಐಡಿಯ ವಿಶೇಷ ತನಿಖಾ ದಳ (ಎಸ್‌ಐಟಿ) ದೃಢಪಡಿಸಿದೆ.

22 ಸಾವಿರ ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಇಲ್ಲಿನ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ (ಡಿ.12) ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ. ಅಕ್ರಮ ನಡೆದ ಜಾಡಿನ ಬೆನ್ನುಬಿದ್ದಿದ್ದ ಎಸ್‌ಐಟಿ, ಇವೆಲ್ಲವನ್ನೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ಗೊತ್ತಾಗಿದೆ. 

ADVERTISEMENT

ಮತ ಕಳವು ಕೃತ್ಯದಲ್ಲಿ ಮಾಜಿ ಶಾಸಕರ ಆಪ್ತ ಸಹಾಯಕ ತಿಪ್ಪೇರುದ್ರ, ಕಲಬುರಗಿಯ ಮೂರು ‘ಡೇಟಾ ಸೆಂಟರ್’ಗಳ ನಿರ್ವಾಹಕರಾದ ಅಕ್ರಮ್ ಪಾಷಾ, ಮುಕರ್‍ರಮ್ ಪಾಷಾ ಮತ್ತು ಮೊಹಮ್ಮದ್ ಅಶ್ಫಾಕ್ ಹಾಗೂ ಪಶ್ಚಿಮ ಬಂಗಾಳದ ಬಾಪಿ ಅದ್ಯಾ ಅವರ ಪಾತ್ರ ಇರುವುದೂ ತನಿಖೆ ವೇಳೆ ಪತ್ತೆಯಾಗಿದೆ ಎಂಬುದಾಗಿ ತನಿಖಾಧಿಕಾರಿಗಳು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5,994 ಮತಗಳನ್ನು ಅಳಿಸಿ ಹಾಕಲು ಅಲ್ಲಿನ ಕಾಲ್‌ ಸೆಂಟರ್‌ವೊಂದನ್ನು ಸುಭಾಷ್ ಗುತ್ತೇದಾರ್, ಹರ್ಷಾನಂದ ಬಳಸಿಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಕೃತ್ಯಕ್ಕೆ ಸಂಬಂಧಪಟ್ಟಂತೆ ಸುಭಾಷ್‌ ಗುತ್ತೇದಾರ್ ಮನೆ, ಕಚೇರಿ ಹಾಗೂ ಇನ್ನಿತರ ಆರೋಪಿಗಳ ಮನೆಗಳ ಮೇಲೂ ದಾಳಿ ನಡೆಸಿದ್ದ ಎಸ್‌ಐಟಿ ಮಾಹಿತಿ ಕಲೆ ಹಾಕಿತ್ತು. ಸಾಕಷ್ಟು ದಾಖಲೆಗಳನ್ನು ಜಪ್ತಿ ಮಾಡಿಕೊಂಡಿತ್ತು.   

2023ರಲ್ಲಿ ಮತ ಕಳವು ನಡೆದಿತ್ತು ಎಂದು ಆರೋಪಿಸಿ ಕಾಂಗ್ರೆಸ್‌ ಶಾಸಕ ಬಿ.ಆರ್.ಪಾಟೀಲ ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ, ರಾಜ್ಯ ಸರ್ಕಾರವು ವಿಶೇಷ ತನಿಖಾ ದಳ ರಚಿಸಿತ್ತು.

ಪತ್ತೆಯಾಗಿದ್ದೇನು?

ಕಲಬುರಗಿಯಲ್ಲಿ ಅಕ್ರಮ್ ಪಾಷಾ ಅವರು ಕಾಲ್ ಸೆಂಟರ್‌ ನಡೆಸುತ್ತಿದ್ದರು. ಅವರಿಗೆ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಬೇಕಾದ ಮತದಾರರ ವಿವರವನ್ನು ಸುಭಾಷ್ ಗುತ್ತೇದಾರ್ ಹಾಗೂ ಅವರ ಮಗ ಹರ್ಷಾನಂದ್ ನೀಡಿದ್ದರು. ಮತದಾರರ ಹೆಸರು ತೆಗೆದುಹಾಕುವ ಕೆಲಸವನ್ನು ಅಕ್ರಮ್ ಪಾಷಾ ನೇತೃತ್ವದ ತಂಡ ನಡೆಸಿತ್ತು. ಮಾಜಿ ಶಾಸಕರಿಂದ ಪ್ರತಿ ಅರ್ಜಿಗೆ ₹80 ಅನ್ನು ಅಕ್ರಮ್‌ ಪಾಷಾ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಕಾಲ್‌ ಸೆಂಟರ್‌ ತಂಡಕ್ಕೆ ₹4.6 ಲಕ್ಷ ಪಾವತಿ ಆಗಿದೆ. ಇದರಲ್ಲಿ ಒಟಿಪಿ ಪಡೆಯಲು, ತಲಾ ಒಂದು ಒಟಿಪಿಗೆ ₹10 ಅನ್ನು ಪಶ್ಚಿಮ ಬಂಗಾಳದ ಆರೋಪಿ ಆದ್ಯನ ಬ್ಯಾಂಕ್ ಖಾತೆಗೆ ಜಮೆ ಮಾಡಿರುವುದು ತನಿಖೆ ವೇಳೆ ದೃಢಪಟ್ಟಿದೆ. 

ಹರ್ಷಾನಂದ 

ತನಿಖೆ ವೇಳೆ ಸಿಕ್ಕಿದ ಪುರಾವೆಗಳು...

* ಎಸ್‌ಐಟಿ ದಾಳಿಗೂ ಮುನ್ನ ಆರೋಪಿಗಳು ಕೆಲವು ದಾಖಲೆಗಳನ್ನು ಸುಟ್ಟು ಹಾಕಿರುವುದು ಪತ್ತೆ * ಮತ ಕಳವು ಯತ್ನ ನಡೆಸಿದ್ದಕ್ಕೆ ಅಕ್ರಮ್‌ ಪಾಷಾ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್‌ನಲ್ಲಿ ಸಿಕ್ಕಿದ ಪುರಾವೆ * ಅಕ್ರಮ ಪಾಷಾ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಬಾಪಿ ಆದ್ಯ ನಡುವೆ ನಡೆದಿದ್ದ ಹಣದ ವ್ಯವಹಾರ * ಮೊಬೈಲ್‌ ಕರೆಗಳ ವಿವರ ಪರಿಶೀಲನೆ ನಡೆಸಿದಾಗ ಆರೋಪಿಗಳ ನಡುವೆ ಸಂಭಾಷಣೆ ನಡೆದಿರುವುದು ಪತ್ತೆ * ದೋಷಾರೋಪಪಟ್ಟಿಯ ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಸೇರಿಸಿ ನ್ಯಾಯಾಲಯಕ್ಕೆ ಸುದೀರ್ಘವಾದ ವರದಿ ಸಲ್ಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.