ಸಿದ್ದರಾಮಯ್ಯ , ಮುಖ್ಯಮಂತ್ರಿ
ಬೆಂಗಳೂರು: ‘ಆಳಂದ ವಿಧಾನಸಭಾ ಕ್ಷೇತ್ರದ ಪ್ರಕರಣವು ಈ ಒಂದು ಕ್ಷೇತ್ರಕ್ಕೆ ಸೀಮಿತವಾದದ್ದಲ್ಲ. ಇದು ಬೃಹತ್ ಚುನಾವಣಾ ಅಕ್ರಮ ಜಾಲದ ಒಂದು ಕೊಂಡಿಯಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ‘ಇದೇ ಮಾದರಿಯಲ್ಲಿ ಇಡೀ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ದುರುಪಯೋಗದ ಮೂಲಕ ಭಾರತೀಯರನ್ನು ಅವರ ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ’ ಎಂದು ದೂರಿದ್ದಾರೆ.
ಆಳಂದ ಪ್ರಕರಣದಲ್ಲಿ ಭಾಗಿಯಾದವರು ಯಾರು? ಯಾವ ಸ್ಥಳದಿಂದ ಈ ಕೃತ್ಯಗಳು ನಡೆದಿದ್ದವು ಎಂದು ಪತ್ತೆಹಚ್ಚಲು ತಾಂತ್ರಿಕ ಮಾಹಿತಿಗಳಾದ ಐಪಿ ಅಡ್ರೆಸ್, ಬಳಕೆಯಾದ ಡಿವೈಸ್‌ಗಳು ಮತ್ತು ಒಟಿಪಿ ಪಡೆದವರ ವಿವರಗಳಿಗಾಗಿ ಸಿಐಡಿ ಕಡೆಯಿಂದ 18 ನಿರಂತರ ಮನವಿಗಳನ್ನು ಸಲ್ಲಿಸಿದ ಹೊರತಾಗಿಯೂ ಚುನಾವಣಾ ಆಯೋಗ ನೀಡದಿರಲು ಕಾರಣವೇನು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ’ ಎಂದಿದ್ದಾರೆ.
‘ರಾಹುಲ್ ಗಾಂಧಿ ಅವರು ಬಹಿರಂಗಪಡಿಸಿರುವ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಸತ್ಯಾಂಶಗಳು ಆಘಾತಕಾರಿಯಾಗಿವೆ. ಅವರು ಮುಂದಿಟ್ಟಿರುವ ಸಾಕ್ಷ್ಯಗಳ ಆಧಾರದಲ್ಲಿ ನೋಡುವುದಾದರೆ ಇದು ಸ್ಥಳೀಯವಾಗಿ ನಡೆದ ಅಕ್ರಮವಲ್ಲ ಎಂಬುದು ಸ್ಪಷ್ಟ. ಪ್ರತಿ ಬೂತ್‌ನ ಮೊದಲ ಮತದಾರನ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನಕಲಿ ಮೊಬೈಲ್ ನಂಬರ್‌ಗಳು ಸೇರ್ಪಡೆಗೊಂಡಿವೆ ಮತ್ತು ಕಾಂಗ್ರೆಸ್ ಪ್ರಾಬಲ್ಯವಿರುವ ಬೂತ್‌ಗಳಲ್ಲಿ ಮತದಾರರ ಹೆಸರು ಡಿಲೀಟ್ ಮಾಡುವ ಪ್ರಕ್ರಿಯೆಯು ಕೇಂದ್ರೀಕೃತವಾಗಿ ನಡೆದಿದೆ’ ಎಂದಿದ್ದಾರೆ.
‘ಆಳಂದ ಮತಕ್ಷೇತ್ರ ದೊಡ್ಡ ಅಕ್ರಮದ ಸಣ್ಣ ಕುರುಹು ಇರಬಹುದೇ? 2018ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿ ಅಲ್ಪ ಅಂತರದಲ್ಲಿ ಜಯಿಸಿತ್ತು. 2023ರಲ್ಲಿ ಸುಮಾರು 6 ಸಾವಿರ ಹೆಸರನ್ನು ಡಿಲೀಟ್ ಮಾಡುವ ಪ್ರಯತ್ನ ನಡೆದಿತ್ತು. 2024ರಲ್ಲಿ ಬಿಜೆಪಿ ಮತ್ತದೇ ಪ್ರಯತ್ನಕ್ಕೆ ಕೈಹಾಕಿತ್ತು. ದೇಶದಾದ್ಯಂತ ಇಂತಹ ಎಷ್ಟು ಅಕ್ರಮಗಳು ಗಮನಕ್ಕೆ ಬಾರದೆಯೇ ನಡೆದಿರಬಹುದು? ಎಷ್ಟು ಫಲಿತಾಂಶಗಳು ಇದರಿಂದ ಅದಲು ಬದಲಾಗಿರಬಹುದು ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತಿವೆ’ ಎಂದೂ ಹೇಳಿದ್ದಾರೆ.
‘ಆಳಂದ ಮತಕ್ಷೇತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ಒಂದು ವಾರದ ಒಳಗೆ ಸಿಐಡಿಗೆ ಚುನಾವಣಾ ಆಯೋಗ ಒದಗಿಸಬೇಕು’ ಎಂದು ಆಗ್ರಹಿಸಿದ ಮುಖ್ಯಮಂತ್ರಿ, ‘ಒದಗಿಸಲು ಚುನಾವಣಾ ಆಯೋಗ ವಿಫಲವಾದರೆ ಚುನಾವಣಾ ಅಕ್ರಮಗಳ ಮೂಲಕ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುತ್ತಿರುವ ದುಷ್ಟರ ರಕ್ಷಣೆಗೆ ಆಯೋಗ ನಿಂತಿದೆ ಎಂಬುದು ಸಾಬೀತಾಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.