ADVERTISEMENT

ಆಳಂದ | ಮತದಾರರ ಚೀಟಿ ರದ್ದತಿ ಆರೋಪ; ಅರ್ಜಿ ಸಲ್ಲಿಸಿದ್ದು ನಿಜ: ಚುನಾವಣಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 20:32 IST
Last Updated 18 ಸೆಪ್ಟೆಂಬರ್ 2025, 20:32 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಗುರುತಿನ ಚೀಟಿ ರದ್ದತಿಗೆ ಶಂಕಾಸ್ಪದ ಸ್ವರೂಪದಲ್ಲಿ 6,018 ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂಬುದನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಆಳಂದ ಕ್ಷೇತ್ರದ ಮತದಾರರಿಗೆ ಗೊತ್ತಾಗದ ರೀತಿಯಲ್ಲಿ 6,018 ಮತದಾರರ ಚೀಟಿಯನ್ನು ರದ್ದುಪಡಿಸಲು ಯತ್ನಿಸಲಾಗಿತ್ತು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಆರೋಪ ಕುರಿತಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ‘ಎಕ್ಸ್‌’ನಲ್ಲಿ ಪ್ರಕಟಣೆ ಹೊರಡಿಸಿದೆ.

ADVERTISEMENT

‘2022ರ ಡಿಸೆಂಬರ್‌ನಲ್ಲಿ ಎನ್‌ವಿಎಸ್‌ಪಿ, ವಿಎಚ್‌ಎ ಮತ್ತು ಗರುಡ ಆ್ಯಪ್‌ಗಳನ್ನು ಬಳಸಿಕೊಂಡು 6,018 ಅರ್ಜಿ (ಮತದಾರರ ಚೀಟಿ ರದ್ದತಿಗೆ ಬಳಸುವ ನಮೂನೆ–7) ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಲಾಗಿತ್ತು. ಅಷ್ಟು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದರಿಂದ ಆ ಬಗ್ಗೆ ಸಂದೇಹ ವ್ಯಕ್ತವಾಗಿತ್ತು’ ಎಂದು ಪ್ರಕಟಣೆ ತಿಳಿಸಿದೆ.

‘ಆ ಪ್ರತಿ ಅರ್ಜಿಗಳನ್ನು ನಮ್ಮ ಮತಗಟ್ಟೆ ಅಧಿಕಾರಿಗಳು, ಮತದಾರರ ನೋಂದಣಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದ್ದರು. ಅವುಗಳಲ್ಲಿ 24 ಮಾತ್ರವೇ ನೈಜ ಅರ್ಜಿಗಳಾಗಿದ್ದು, ಅವುಗಳನ್ನು ಮಾತ್ರ ಅಂಗೀಕರಿಸಲಾಗಿತ್ತು. ಉಳಿದ 5,994 ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು’ ಎಂದು ವಿವರಿಸಿದೆ.

‘ಮತಗಟ್ಟೆ ಅಧಿಕಾರಿಗಳು ಮತ್ತು ಮತದಾರರ ನೋಂದಣಾಧಿಕಾರಿಗಳ ವರದಿಯ ಆಧಾರದಲ್ಲಿ 2023ರ ಫೆಬ್ರುವರಿ 21ರಂದು ಆಳಂದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ತನಿಖಾಧಿಕಾರಿಯ ಕೋರಿಕೆ ಮೇರೆಗೆ, ಮುಖ್ಯ ಚುನಾವಣಾಧಿಕಾರಿಯು ತನಿಖಾಧಿಕಾರಿ ಮತ್ತು ಸೈಬರ್ ಭದ್ರತಾ ತಜ್ಞರ ಜತೆಗೆ ಸಭೆ ನಡೆಸಿದ್ದರು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.