ADVERTISEMENT

ನಾಲ್ಕುಪಟ್ಟು ದರಕ್ಕೆ ಮದ್ಯ!, ಬೆಂಗಳೂರು ನಗರದಲ್ಲಿ 18 ಎಫ್‌ಐಆರ್ ದಾಖಲು

ಅಕ್ರಂ ಮೊಹಮ್ಮದ್
Published 5 ಏಪ್ರಿಲ್ 2020, 19:36 IST
Last Updated 5 ಏಪ್ರಿಲ್ 2020, 19:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದರೂ, ವಿವಿಧ ಬ್ರ್ಯಾಂಡ್‌ಗಳ ಮದ್ಯ ಬಾಟಲಿಗಳು ನಿಜವಾದ ದರಕ್ಕಿಂತ ಮೂರು, ನಾಲ್ಕು ಪಟ್ಟು ಹೆಚ್ಚು ದರಕ್ಕೆ ಅಕ್ರಮವಾಗಿ ಮಾರಾಟವಾಗುತ್ತಿದೆ. ಅಲ್ಲದೆ, ಸಿಗರೇಟ್‌ ಕೂಡಾ ಎಂಆರ್‌ಪಿಗಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ, ಈ ರೀತಿ ಅಕ್ರಮವಾಗಿ ಮಾರಾಟ ಮಾಡುವವರನ್ನು ಬಂಧಿಸಿ, ಮದ್ಯ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಈಗಾಗಾಲೇ ಬೆಂಗಳೂರು ನಗರದಲ್ಲಿ 18 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 2,500 ಲೀಟರ್‌ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

₹160 ಬೆಲೆಯ ಸಿಗರೇಟ್‌ ಪ್ಯಾಕೇಟ್‌ಗೆ ₹300 ವಸೂಲು ಮಾಡಲಾಗುತ್ತಿದೆ. ₹150ರಿಂದ ₹ 170 ದರದ ಬಿಯರ್‌ ಬಾಟಲಿಗೆ ₹600 ವಸೂಲಿ ಮಾಡಲಾಗುತ್ತಿದೆ. ಅದರಲ್ಲೂ ಕೆಲವು ಪ್ರಮಖ ಬ್ರ್ಯಾಂಡ್‌ಗಳ ಮದ್ಯ ಬಾಟಲಿ ಭಾರಿ ಮೊತ್ತಕ್ಕೆ ಮಾರಾಟವಾಗುತ್ತಿದೆ.

ADVERTISEMENT

ಅಬಕಾರಿ ಹೆಚ್ಚುವರಿ ಆಯುಕ್ತ ವೆಂಕಟ್‌ರಾಜ್‌ ಪ್ರತಿಕ್ರಿಯಿಸಿ, ‘ಅಕ್ರಮವಾಗಿ ಮದ್ಯ ಮಾರಾಟ ಯತ್ನಗಳು ಕೆಲವಡೆ ನಡೆದಿದೆ. ಇಲಾಖೆ ಈಗಾಗಲೇ ಕೆಲವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದೆ. ಕೆಲವೆಡೆ ಮದ್ಯ ಕಳವು ಮಾಡಿದ ಘಟನೆಗಳೂ ನಡೆದಿವೆ’ ಎಂದರು.

ಇಲಾಖೆಯ ಜಂಟಿ ಆಯುಕ್ತ (ಅಬಕಾರಿ) ಎ.ಎಲ್‌. ನಾಗೇಶ್‌ ಮಾತನಾಡಿ, ‘ಈಗಾಗಲೇ 5 ಮದ್ಯದಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ. ಇನ್ನೂ ಮೂರು ಅಂಗಡಿಗಳ ಪರವಾನಗಿ ರದ್ದತಿಗೆ ಶಿಫಾರಸು ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

₹ 1 ಲಕ್ಷ ಮೌಲ್ಯದ ಮದ್ಯ ಕಳ್ಳತನ

ಶ್ರೀನಿವಾಸಪುರ: ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್‌ ಸಮೀಪ ಶನಿವಾರ ರಾತ್ರಿ ಮದ್ಯದ ಅಂಗಡಿಯೊಂದರ ಬಾಗಿಲು ಮುರಿದು ₹ 1 ಲಕ್ಷ ಮೌಲ್ಯದ ಮದ್ಯವನ್ನು ಕಳ್ಳತನ ಮಾಡಲಾಗಿದೆ.

ಅಂಗಡಿಯ ಷಟರ್‌ ಮುರಿದು ಕೃತ್ಯ ಎಸಗಲಾಗಿದೆ. ಮದ್ಯದ ಅಂಗಡಿ ಆರಂಭವಾದ ದಿನದಿಂದ ಇಲ್ಲಿಯವರೆಗೆ 5 ಬಾರಿ ಕಳ್ಳತನ ನಡೆದಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.