ADVERTISEMENT

ಉಜ್ಜಯಿನಿ ಪೀಠ: ಪರ್ಯಾಯ ವ್ಯವಸ್ಥೆ

ವೀರಶೈವ ಶಿವಾಚಾರ್ಯರ ಸಂಸ್ಥೆಯ ನಿರ್ಣಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:32 IST
Last Updated 28 ಡಿಸೆಂಬರ್ 2020, 19:32 IST
ಕೊಟ್ಟೂರು ತಾಲ್ಲೂಕಿನ ಉಜ್ಜಿನಿ ಸದ್ದರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ
ಕೊಟ್ಟೂರು ತಾಲ್ಲೂಕಿನ ಉಜ್ಜಿನಿ ಸದ್ದರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ    

ಬೆಂಗಳೂರು: ‘ಪಂಚಪೀಠಗಳ ಜಗದ್ಗುರುಗಳು ಉಜ್ಜಯಿನಿ ಪೀಠದ ವಿಷಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸದೆ, ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗದಿದ್ದರೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಹೇಳಿದೆ.

ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯವನ್ನೂ ಕೈಗೊಳ್ಳಲಾಗಿದೆ. ‘ಪಂಚಪೀಠಗಳ ಪೈಕಿ ಉಜ್ಜಯಿನಿ ಪೀಠದ ವಿಚಾರದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಈ ವಿಷಯದಲ್ಲಿ ರಂಭಾಪುರಿ ಶ್ರೀ ಮತ್ತು ಕೇದಾರ ಜಗದ್ಗುರುಗಳ ನಿಲುವು ಪಂಚಪೀಠಗಳ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ’ ಎಂದು ಸಂಸ್ಥೆಯ ಗೌರವ ಅಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

‘ಉಜ್ಜಯಿನಿ ಪೀಠದ ಪರಂಪರೆಗೆ ಅನುಗುಣವಾಗಿಯೇ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರ ಕಾರ್ಯಕ್ರಮ ನೆರವೇರಿದೆ. ಪಂಚಪೀಠಗಳು ಹಾಗೂ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಸಚಿವರ ಸಮ್ಮುಖದಲ್ಲಿಯೇ ಈ ಪಟ್ಟಾಧಿಕಾರ ಕಾರ್ಯಕ್ರಮ ನಡೆದಿತ್ತು. ಅದರಂತೆ ಸಿದ್ಧಲಿಂಗ ಶಿವಾಚಾರ್ಯರೇ ಉಜ್ಜಯಿನಿ ಪೀಠದ ಜಗದ್ಗುರುಗಳು’ ಎಂಬ ನಿರ್ಣಯವನ್ನು ಸಭೆ ತೆಗೆದುಕೊಂಡಿದೆ.

ADVERTISEMENT

‘ಉಜ್ಜಯಿನಿ ಪೀಠದ ಹಿಂದಿನ ಜಗದ್ಗುರುಗಳು ತ್ರಿಲೋಚನರು ಪೀಠಾಧಿಪತಿ ಆಗಬೇಕು ಎಂದು ಉಯಿಲು ಬರೆದಿದ್ದಾರೆ ಎಂಬ ಕಾರಣಕ್ಕೆ ರಂಭಾಪುರಿ ಶ್ರೀಗಳು ಮತ್ತು ಕೇದಾರನಾಥ ಶ್ರೀಗಳು ಅವರ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಿದ್ಧಲಿಂಗ ಜಗದ್ಗುರುಗಳು ಪೀಠಾಧಿಪತಿಯಾಗಿ 11 ವರ್ಷಗಳ ನಂತರ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ’ ಎಂದು ಸ್ವಾಮೀಜಿಯೊಬ್ಬರು ಹೇಳಿದರು.

ಹೊಸ ಆಡಳಿತ ಮಂಡಳಿ: ‘ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಪದಾಧಿಕಾರಿಗಳ ಕಾರ್ಯವೈಖರಿಯೂ ಅಸಮರ್ಪಕ ಮತ್ತು ಅವ್ಯವಹಾರದಿಂದ ಕೂಡಿದೆ. ಸಂಸ್ಥೆಯ ಗೌರವ ಅಧ್ಯಕ್ಷರಾಗಿರುವ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಂಗಾಮಿ ಆಡಳಿತ ಮಂಡಳಿ ರಚಿಸಬೇಕು. ಇದು ಡಿ.27ರಿಂದಲೇ ಜಾರಿಗೆ ಬರಬೇಕು. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಹಂಗಾಮಿ ಮಂಡಳಿಯೇ ಅಸ್ತಿತ್ವದಲ್ಲಿರಬೇಕು’ ಎಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರ ಸರ್ಕಾರ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಸೌಲಭ್ಯ ಕಲ್ಪಿಸಲು ರಾಜ್ಯಸರ್ಕಾರ ಶೀಘ್ರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ

ಸಭೆಯಲ್ಲಿ 100ಕ್ಕಿಂತ ಹೆಚ್ಚು ಮಠಾಧಿಪತಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.