ADVERTISEMENT

‘ಅರಣ್ಯ ಇಲಾಖೆ ವ್ಯಾಪ್ತಿಗೆ ಎಲ್ಲ ಕೆರೆ’

ಅರಣ್ಯ ಸಚಿವ ಆರ್. ಶಂಕರ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 20:09 IST
Last Updated 27 ಜೂನ್ 2018, 20:09 IST

ಬೆಂಗಳೂರು: ಬೆಂಗಳೂರಿನ ಬೆಳ್ಳಂದೂರು ಕೆರೆ ಸೇರಿದಂತೆ ಬಿಡಿಎ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆ ವ್ಯಾಪ್ತಿಗೆ ತರುವ ಚಿಂತನೆ ಇದೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕೆರೆಗಳಿಗೆ ತ್ಯಾಜ್ಯವನ್ನು ಬಿಡುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ.‌ ಕೆರೆ ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದರು.

‌‘ಬಿಬಿಎಂಪಿ ವ್ಯಾಪ್ತಿಯ ಕೆರೆಗಳೂ ಸೇರಿ ರಾಜ್ಯದಲ್ಲಿರುವ ಕೆರೆಗಳನ್ನು ವಿವಿಧ ಇಲಾಖೆಗಳಿಂದ ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆ ಚರ್ಚಿಸಲಾಗಿದೆ. ಈ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

‘15 ವರ್ಷಕ್ಕೂ ಹಿಂದಿನ ಡೀಸೆಲ್ ಎಂಜಿನ್ ವಾಹನಗಳನ್ನು ನಿಷ್ಕ್ರಿಯಗೊಳಿಸಲು ರಾಜ್ಯ ಸರ್ಕಾರ ವಾಹನಗಳ ಮಾಲೀಕರಿಗೆ ₹30,000 ಪ್ರೋತ್ಸಾಹಧನ ನೀಡುತ್ತಿದೆ. ಈ ಪ್ರೋತ್ಸಾಹಧನ ಹೆಚ್ಚಿಸಲು ಚಿಂತನೆ ನಡೆದಿದೆ. ಹಳೆಯ ಡೀಸೆಲ್ ವಾಹನಗಳಿಂದ ಪರಿಸರಕ್ಕೆ ಭಾರಿ ಧಕ್ಕೆ ಆಗುತ್ತಿರುವ ಕಾರಣ ದೆಹಲಿ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕ್ರಮಕ್ಕೆ ಮುಂದಾಗಿದೆ’ ಎಂದರು.

ಬಜೆಟ್‌ನಲ್ಲಿ ಇಲಾಖೆಗೆ ₹1,500 ಕೋಟಿ ನೀಡಲಾಗಿದೆ. ಈ ಬಾರಿ ಹೆಚ್ಚುವರಿಯಾಗಿ ₹560 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕೋರಿದ್ದೇನೆ ಎಂದು ಹೇಳಿದರು.

‘ಈಗಾಗಲೇ 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮ ರೂಪಿಸಲಾಗಿದೆ. ಅದನ್ನು 10 ಕೋಟಿಗೆ ಹೆಚ್ಚಿಸುವ ಉದ್ದೇಶ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.