ADVERTISEMENT

ವಿದೇಶದಿಂದ ಬಂದವರ ಸಂಪರ್ಕ ಇಲ್ಲದವರಿಗೆ ಸೋಂಕು ಹೇಗೆ ತಗಲಿತು?: ಸಿದ್ದರಾಮಯ್ಯ

ಡಿಸಿಎಂ–ಸಚಿವರ ನಡುವೆ ಸಮನ್ವಯ ಇಲ್ಲ: ಡಿಕೆಶಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 2:10 IST
Last Updated 30 ಮಾರ್ಚ್ 2020, 2:10 IST
ಸರ್ವಪಕ್ಷಗಳ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಇದ್ದರು –ಪ್ರಜಾವಾಣಿ ಚಿತ್ರ
ಸರ್ವಪಕ್ಷಗಳ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೊರೊನಾ ಪಿಡುಗು ನಿವಾರಣೆ ವಿಚಾರದಲ್ಲಿ ಉಪ ಮುಖ್ಯಮಂತ್ರಿಗಳು ಮತ್ತು ಸಚಿವರ ನಡುವೆ ಸಮನ್ವಯ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಸಮನ್ವಯ ತರುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ಜನರಲ್ಲಿ ಗೊಂದಲ, ಭಯ ಮೂಡಿಸುತ್ತಿದ್ದಾರೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಕೊರೊನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ಸರ್ಕಾರದ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ ಮತ್ತು ವೈಯಕ್ತಿಕವಾಗಿ ನನ್ನ ಬೆಂಬಲವಿದೆ' ಎಂದೂ ಅವರು ಹೇಳಿದರು.

ADVERTISEMENT

'ಕೊರೊನಾ ನಿರ್ವಹಣೆ ವಿಷಯದಲ್ಲಿ ಸರ್ಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರ್ಕಾರದ ಪ್ರತಿನಿಧಿಗಳ, ಯಾವುದೊ ರಾಜಕೀಯ ಪಕ್ಷದ ತತ್ವ, ಸಿದ್ಧಾಂತ, ರಾಜಕೀಯ ಲಾಭಕ್ಕೆ ಬಳಕೆ ಆಗಬಾರದು‘ ಎಂದರು.

ಸೋಂಕು ಹೇಗೆ ತಗಲಿತು?: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ವಿದೇಶದಿಂದ ಬಂದವರ ಸಂಪರ್ಕ ಇಲ್ಲದ ನಂಜನಗೂಡಿನ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಶಿರಾದಲ್ಲಿಯೂ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಇಬ್ಬರಿಗೂ ಸೋಂಕು ಹೇಗೆ ತಗಲಿತು ಎಂಬುವುದನ್ನು ಸರ್ಕಾರ ತಿಳಿಸಬೇಕು‘ ಎಂದರು.

’ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಮೂರನೇ ಹಂತಕ್ಕೆ ಹೋಗುವುದನ್ನು ತಡೆಯುವ ಮತ್ತು ಅದನ್ನು ನಿಭಾಯಿಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕು. ನಮ್ಮ ತಪ್ಪಿನಿಂದ ಯಾವ ನ್ಯೂನತೆ ಆಗದಂತೆ ಕ್ರಮ ಕೈಗೊಳ್ಳಬೇಕು. ವಿದೇಶದಿಂದ ಬಂದ 23 ಸಾವಿರ ಮಂದಿ ಪೈಕಿ 4,00 ಮಂದಿಯನ್ನು ಇನ್ನೂ ಗುರುತಿಸಬೇಕಿದೆ ಎಂದು ಸರ್ಕಾರ ಹೇಳಿದೆ. ಅವರನ್ನು ಕೂಡಲೇ ಪತ್ತೆ ಮಾಡಬೇಕು‘ ಎಂದರು.

‘ಮಾಸ್ಕ್, ಸ್ಯಾನಿಟೈಸರ್, ಪಿಪಿಇ, ಟೆಸ್ಟಿಂಗ್ ಕಿಟ್ ಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಬಂದಿರುವುದೂ ಗುಣಮಟ್ಟದ್ದಲ್ಲ. ಮಾಸ್ಕ್ ತಯಾರಿಕೆ ಕೆಲಸವನ್ನು ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ವಗಿಸಬೇಕು. ಒಂದೊಂದು ಪಂಚಾಯಿತಿಗೆ ಒಬ್ಬ ವೈದ್ಯಾಧಿಕಾರಿ ಹಾಗೂ, ಆಹಾರ, ಕೃಷಿ ಮಾರುಕಟ್ಟೆ ಹಾಗೂ ಕೃಷಿ ಅಧಿಕಾರಿಯನ್ನು ನೇಮಿಸಬೇಕು. ಏಪ್ರಿಲ್, ಮೇ ತಿಂಗಳಲ್ಲಿ ಮುಂಗಾರು ಪೂರ್ವ ಬಿತ್ತನೆ ಆರಂಭವಾಗುವುದರಿಂದ, ಬೀಜ, ಗೊಬ್ಬರ ಸಿಗುವಂತಾಗಬೇಕು. ಪೊಲೀಸರಿಗೂ ವಿಮೆ ಮಾಡಿಸುವುದು ಸೂಕ್ತ. ಪೌರ ಕಾರ್ಮಿಕರಿಗೂ ವಿಮೆ ಸೌಲಭ್ಯ ಸಿಗಬೇಕು’ ಎಂದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕೂಡಾ ಸೋಂಕು ನಿವಾರಣೆಗೆ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.