ADVERTISEMENT

‘ಟಾಕ್ಸಿಕ್‌’ ಸಿನಿಮಾಕ್ಕಾಗಿ ಮರಗಳ ಹನನ ಆರೋಪ: ತನಿಖೆಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 16:08 IST
Last Updated 5 ಡಿಸೆಂಬರ್ 2024, 16:08 IST
<div class="paragraphs"><p>ಹೈಕೋರ್ಟ್‌&nbsp;</p></div>

ಹೈಕೋರ್ಟ್‌ 

   

ಬೆಂಗಳೂರು: ‘ನಟ ಯಶ್‌ ಪ್ರಧಾನ ಭೂಮಿಕೆಯಲ್ಲಿರುವ ಟಾಕ್ಸಿಕ್‌ ಸಿನಿಮಾ ಚಿತ್ರೀಕರಣಕ್ಕಾಗಿ ಜಾಲಹಳ್ಳಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಮರಗಳ ಹನನ ಮಾಡಲಾಗಿದೆ’ ಎಂದು ಆರೋಪಿಸಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ ವಿರುದ್ಧ ನಡೆಸಲಾಗುತ್ತಿರುವ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ವಿಧಿಸಿದೆ.

‘ನಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಈ ಸಂಬಂಧ 8ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ‘ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ’ ಸಂಸ್ಥೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಬಿಪಿನ್‌ ಹೆಗ್ಡೆ, ‘ಜಾರಕಬಂಡೆ ಕಾವಲ್‌ ಮತ್ತು ಪೀಣ್ಯ ಪ್ಲಾಂಟೇಶನ್‌ನಲ್ಲಿನ 443 ಎಕರೆಯನ್ನು ಮೈಸೂರು ಸರ್ಕಾರವು 1963ರಲ್ಲಿ ಹಿಂದೂಸ್ತಾನ್‌ ಮೆಷಿನ್ಸ್‌ ಟೂಲ್ಸ್‌ಗೆ (ಎಚ್‌ಎಂಟಿ) ನೀಡಿತ್ತು. ಇದರಲ್ಲಿ ಎಚ್‌ಎಂಟಿ 18.2 ಎಕರೆ ಜಾಗವನ್ನು ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿತ್ತು. ಈ ಜಾಗವನ್ನು ಕೆವಿಎನ್‌ ಸಂಸ್ಥೆ ಭೋಗ್ಯಕ್ಕೆ ಪಡೆದು ತಾತ್ಕಾಲಿಕವಾಗಿ ಟಾಕ್ಸಿಕ್‌ ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್‌ ನಿರ್ಮಿಸಿದೆ. ಆದರೆ, ಈ ಪ್ರದೇಶ ಮೀಸಲು ಅರಣ್ಯ ಎಂದು ಅರ್ಜಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಆಕ್ಷೇಪಿಸಿದರು.

‘ಈ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೊ ತೆಗೆದುಕೊಂಡು ಅದನ್ನು ಟ್ವೀಟ್‌ ಮಾಡಿದ್ದರು ಎನ್ನಲಾಗಿದೆ. ಆದರೆ, ಜಾಲಹಳ್ಳಿ ಪ್ರದೇಶ ಅರಣ್ಯವೇ ಅಲ್ಲ ಎಂದು ಈಗ ಸರ್ಕಾರವೇ ಹೇಳುತ್ತಿದೆ. ಈ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿವೆ. ಆಸ್ಪತ್ರೆ ನಿರ್ಮಾಣಗೊಂಡಿದೆ. ಸಿನಿಮಾ ಚಿತ್ರೀಕರಣಕ್ಕೆ ಸೆಟ್‌ ಹಾಕಲು ₹30 ಕೋಟಿ ಖರ್ಚು ಮಾಡಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಅಲ್ಲಿದ್ದ ಗಿಡ ಮರಗಳನ್ನು ಕಡಿದು ಹಾಕಲಾಗಿದೆ’ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೆವಿಎನ್‌ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಎಲ್‌ಎಲ್‌ಪಿ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ-1963 ಕಲಂ 24(ಜಿ) ಅಡಿ ದಾಖಲಿಸಿರುವ ಎಫ್‌ಐಆರ್‌ ಅನ್ವಯದ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು. ವಿಚಾರಣೆಯನ್ನು ನಾಲ್ಕು ವಾರ ಮುಂದೂಡಲಾಗಿದೆ.

ಪ್ರಕರಣವೇನು?:

ಜಾಲಹಳ್ಳಿಯ ಎಚ್‌ಎಂಟಿ ಜಾಗವು ಮೀಸಲು ಅರಣ್ಯವಾಗಿದ್ದು, ಅಲ್ಲಿ ನಿಷೇಧವಿದ್ದರೂ ಗಿಡಗಂಟಿ ಹಾಗೂ ಮರಗಳನ್ನು ತೆರವು ಮಾಡುವ ಮೂಲಕ ಟಾಕ್ಸಿಕ್‌ ಸಿನಿಮಾ ಚಿತ್ರೀಕರಣಕ್ಕಾಗಿ ಸೆಟ್‌ ಹಾಕಲಾಗಿದೆ ಎಂಬ ಆರೋಪವಿದೆ. ಈ ಸಂಬಂಧ ಪ್ರಕರಣ ದಾಖಲಿಸಲು ಅನುಮತಿಸುವಂತೆ ಕೋರಿ ಅರಣ್ಯ ಇಲಾಖೆ ಕಳೆದ ತಿಂಗಳ 4ರಂದು 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್‌ ನವೆಂಬರ್‌ 6ರಂದು ಕರ್ನಾಟಕ ಅರಣ್ಯ ಕಾಯ್ದೆ–1963ರ ಕಲಂ 24 (ಜಿ) ಅಡಿ ಪ್ರಕರಣ ದಾಖಲಿಸಲು ಅನುಮತಿಸಿದ್ದರು. ಇದರ ಅನ್ವಯ ಎಫ್‌ಐಆರ್‌ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.