ADVERTISEMENT

ಬಂಗಾಳದಲ್ಲಿ ಮಹಿಳೆಯರ ಬೆತ್ತಲೆ;ಕೇಂದ್ರವನ್ನು ಕೆಟ್ಟದ್ದಾಗಿ ಬಿಂಬಿಸಲು ಯತ್ನ: ಶೋಭಾ

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 7:29 IST
Last Updated 22 ಜುಲೈ 2023, 7:29 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಹುಬ್ಬಳ್ಳಿ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೇ ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ದೇಶದಾದ್ಯಂತ ಕೆಟ್ಟದ್ದಾಗಿ ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. 

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಾಜಕಾರಣ ಎಲ್ಲರೂ ಮಾಡುತ್ತೇವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕೊಲ್ಲುವ ರಾಜಕಾರಣ ನಡೆದಿದೆ. ಅಲ್ಲಿ ನಡೆದಿರುವಂತಹ ಘಟನೆಯನ್ನು ಇಟ್ಟುಕೊಂಡು ದೇಶದಾದ್ಯಂತ ಕೇಂದ್ರ ಸರ್ಕಾರವನ್ನು ಕೆಟ್ಟದ್ದಾಗಿ ಬಿಂಬಿಸುವ ಪ್ರಯತ್ನ ನಡೆದಿದೆ. ಬೆತ್ತಲೆಗೊಳಿಸಿದ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

ಅಭಿವೃದ್ಧಿ ನೋಡಲಾಗದೆ ದುಷ್ಕೃತ್ಯ:

ADVERTISEMENT

ಮಣಿಪುರದಲ್ಲಿ ಈಗ ಒಂದು ರೀತಿಯಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ ನಡೆಯುತ್ತಿದೆ. ಹಿಂದಿನ ಸರ್ಕಾರಗಳ ತಪ್ಪು ನಿರ್ಧಾರಗಳಿಂದಾಗಿ ನೆರೆಯ ರಾಷ್ಟ್ರಗಳಿಂದ ನುಸುಳುಕೋರರು  ಈಶಾನ್ಯ ರಾಜ್ಯಗಳಲ್ಲಿ ಜಮಾವಣೆಗೊಂಡಿದ್ದಾರೆ. ಅಂತಹವರನ್ನು ಹೊರಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿ ಆಕ್ರೋಶ ಉಂಟಾಗಿ, ಸಂಘರ್ಷ ನಡೆಯುತ್ತಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳನ್ನು ಹಿಂದಿನ ಯುಪಿಎ ಸರ್ಕಾರ ಹಾಗೂ 60 ವರ್ಷ ಸರ್ಕಾರ ನಡೆಸಿದ ಕಾಂಗ್ರೆಸ್‌ ನಿರ್ಲಕ್ಷ್ಯ ಮಾಡಿತ್ತು. ಇದರ ಫಲವಾಗಿ ಅಲ್ಲಿನ ಜನರು ಭಾರತವನ್ನು ಒಪ್ಪಿಕೊಂಡಿರಲಿಲ್ಲ. ಈಗ ಅವರು ಭಾರತವನ್ನು ತಮ್ಮ ದೇಶವೆಂದು ಒಪ್ಪಿಕೊಳ್ಳುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ, ರೈಲು, ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಕೇಂದ್ರ ಸರ್ಕಾರದ ಯೋಜನೆಗಳು ಮನೆಮನೆಗೆ ತಲುಪುತ್ತಿವೆ. ವಿಧ್ವಂಸ ಕೃತ್ಯಗಳನ್ನು ನಡೆಸಲು ಬಂದವರು ಇದನ್ನು ನೋಡಿ, ಆಕ್ರೋಶಗೊಂಡಿದ್ದಾರೆ. ಆ ಆಕ್ರೋಶ ಈಗ ಹೊರಬರುತ್ತಿದೆ ಎಂದು ತಿಳಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಮೂಡಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ಅದೂ ಭಾರತದ ಒಂದು ಭಾಗವಾಗಬೇಕು. ಅಲ್ಲಿನ ನಾಗರಿಕರಿಗೂ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗಬೇಕು. ಇದಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ಚರ್ಚಿಸುತ್ತಿಲ್ಲ. ಹೊರಗೆ ಚರ್ಚಿಸುತ್ತಿವೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.